ADVERTISEMENT

ಮದ್ಯದ ಪಾರ್ಟಿ: 'ಗಟ್ಟಿಮೇಳ' ಧಾರಾವಾಹಿಯ ನಟ ’ರಕ್ಷಿತ್’ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 7:04 IST
Last Updated 29 ಜನವರಿ 2022, 7:04 IST
ಗಟ್ಟಿಮೇಳ ರಕ್ಷಿತ್
ಗಟ್ಟಿಮೇಳ ರಕ್ಷಿತ್   

ಬೆಂಗಳೂರು: ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಮದ್ಯದ ಪಾರ್ಟಿ ಆಯೋಜಿಸಿ ಗುಂಪು ಸೇರಿದ್ದ ಆರೋಪದಡಿ ಕಿರುತೆರೆ ನಟ ರಕ್ಷಿತ್ ಹಾಗೂ ಅವರ ಸ್ನೇಹಿತರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

‘ರಕ್ಷಿತ್ ಹಾಗೂ ಸ್ನೇಹಿತರು, ಕೆಂಗೇರಿ ಬಳಿಯ ಜಿಂಜರ್ ಲೇಕ್ ವ್ಯೂ ಹೋಟೆಲ್‌ನಲ್ಲಿ ರಾತ್ರಿ 1.30ರ ಸುಮಾರಿಗೆ ಪಾರ್ಟಿ ಮಾಡುತ್ತಿದ್ದರು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ವಾಹನದ ಸಿಬ್ಬಂದಿ ಹಾಗೂ ಇನ್‌ಸ್ಪೆಕ್ಟರ್, ಎಲ್ಲರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಕೊರೊನಾ ಸೋಂಕು ತಡೆಯಲು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂಥ ಸಂದರ್ಭದಲ್ಲೇ ರಕ್ಷಿತ್ ಹಾಗೂ ಅವರ 6 ಸ್ನೇಹಿತರು, ಹೋಟೆಲ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಹೀಗಾಗಿ, ಅವರೆಲ್ಲರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ, ಠಾಣೆಯಿಂದ ಕಳುಹಿಸಲಾಗಿದೆ‘ ಎಂದೂ ತಿಳಿಸಿದರು.

ADVERTISEMENT

‘ಗಟ್ಟಿಮೇಳ’ ಧಾರಾವಾಹಿ ನಟನೆಂದು ತಿಳಿಸಿದ್ದ ರಕ್ಷಿತ್, ಶೂಟಿಂಗ್ ಮುಗಿಸಿಕೊಂಡು ಸ್ನೇಹಿತರ ಜೊತೆ ಊಟಕ್ಕೆಂದು ಹೋಟೆಲ್‌ಗೆ ಬಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಪಾರ್ಟಿ ಮಾಡಲು ಅವಕಾಶ ನೀಡಿದ್ದ ಹೋಟೆಲ್‌ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದೂ ಹೇಳಿದರು.

’ರಕ್ಷಿತ್ ಹಾಗೂ ಇತರರು, ಮದ್ಯ ಕುಡಿದಿದ್ದರು ಎಂಬುದಾಗಿ ಸ್ಥಳೀಯರು ಹೇಳಿಕೆ ನೀಡಿದ್ದಾರೆ. ಮದ್ಯದ ಅಮಲಿನಲ್ಲಿ ಚೀರಾಡುತ್ತಿದ್ದರೆಂದೂ ತಿಳಿಸಿದ್ದಾರೆ. ಆ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ‘ ಎಂದೂ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.