ADVERTISEMENT

₹ 7.50 ಲಕ್ಷ ಸಾಲದ ಗಲಾಟೆ; ಎಸಿಪಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 19:30 IST
Last Updated 13 ಜೂನ್ 2021, 19:30 IST

ಬೆಂಗಳೂರು: ‘ಹಲ್ಲೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವ ಬದಲು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಲು ಪೊಲೀಸರ ಮೇಲೆ ಹಲಸೂರು ಗೇಟ್ ಉಪವಿಭಾಗ ಎಸಿಪಿ ನಜ್ಮಾ ಫಾರೂಖಿ ಒತ್ತಡ ಹೇರಿದ್ದು, ಈ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಉದ್ಯಮಿ ಇಮ್ರಾನ್ ಷರೀಫ್ ಎಂಬುವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಗೆ ತೆರಳಿ ದೂರು ಸಲ್ಲಿಸಿರುವ ಇಮ್ರಾನ್, ‘ಎಸಿಪಿ ನಜ್ಮಾ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

‘ನನ್ನ ತಮ್ಮ ಇಲಿಯಾಸ್ ಬಳಿ ಫೈಜಲ್ ಎಂಬಾತ ₹ 7.50 ಲಕ್ಷ ಸಾಲ ತೆಗೆದುಕೊಂಡಿದ್ದ. ಹಲವು ವರ್ಷವಾದರೂ ವಾಪಸು ಕೊಟ್ಟಿರಲಿಲ್ಲ. ಇದರ ವಿರುದ್ಧ ಕಮಿಷನರ್‌ಗೆ ದೂರು ನೀಡಿದ್ದೆ. ವಿಚಾರಣೆ ನೆಪದಲ್ಲಿ ಹಲಸೂರು ಗೇಟ್ ಪೊಲೀಸರು ಠಾಣೆಗೆ ಕರೆಸಿ ಇಬ್ಬರ ನಡುವೆ ಸಂಧಾನ ಮಾಡಿದ್ದರು. ಕಾಲಾವಕಾಶ ತೆಗೆದುಕೊಂಡು ಹಣ ನೀಡುವಂತೆ ಫೈಜಲ್‌ಗೆ ತಾಕೀತು ಮಾಡಿದ್ದರು.’

ADVERTISEMENT

‘ಹಣ ನೀಡುವುದಾಗಿ ಹೇಳಿ ತಮ್ಮನಿಗೆ ಆಹ್ವಾನ ನೀಡಿದ್ದ. ಆತನ ಬದಲು ನಾನೇ ಫೈಜಲ್ ಬಳಿ ಹೋಗಿ ವಿಚಾರಿಸಿದ್ದೆ. ಆಗ ಫೈಜಲ್, ಬೆಂಬಲಿಗರ ಜೊತೆ ಸೇರಿ ಜಗಳ ತೆಗೆದು ಹಲ್ಲೆ ಮಾಡಿದ್ದ. ಮುಖಕ್ಕೆ ಪೆಟ್ಟಾಗಿತ್ತು. ಹಲ್ಲೆ ಬಗ್ಗೆ ದೂರು ನೀಡಿದರೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಬದಲಿಗೆ ಎನ್‌ಸಿಆರ್‌ ಮಾತ್ರ ದಾಖಲಿಸಿಕೊಂಡಿದ್ದಾರೆ. ಎಸಿಪಿ ನಜ್ಮಾ ಅವರ ಒತ್ತಡವೇ ಇದಕ್ಕೆ ಕಾರಣ’ ಎಂದೂ ಇಮ್ರಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಸಿಪಿ ನಜ್ಮಾ, ‘ದೂರುದಾರರು ನೀಡಿದ್ದ ಕೃತ್ಯದ ಸಾರಾಂಶ ಹಾಗೂ ಪುರಾವೆ ಆಧರಿಸಿ ಎನ್‌ಸಿಆರ್ ದಾಖಲಿಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವೆ’ ಎಂದರು.

ಕುಡಿದ ಮತ್ತಿನಲ್ಲಿ ಗಲಾಟೆ?

‘ಇಲಿಯಾಸ್ ಹಾಗೂ ಇಮ್ರಾನ್ ನಡುವೆ ಹಣದ ವಿಚಾರವಾಗಿ ಕುಡಿದ ಮತ್ತಿನಲ್ಲಿ ಮೇ 11ರಂದು ಎಸ್‌.ಪಿ ರಸ್ತೆಯಲ್ಲಿ ಗಲಾಟೆ ಆಗಿತ್ತು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ವಾಹನದ ಸಿಬ್ಬಂದಿಯು ಗಲಾಟೆ ಬಿಡಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಬಹುತೇಕರು, ಮದ್ಯ ಕುಡಿದಿದ್ದರೆಂದು ಸಿಬ್ಬಂದಿಯೇ ದಾಖಲಿಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.