
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ತೆರಳುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿ ಹಣ ದೋಚಿ ಪರಾರಿಯಾಗಿದ್ದ ‘ಓಜಿಕುಪ್ಪಂ ಗ್ಯಾಂಗ್’ನ ಆರೋಪಿಯನ್ನು ಕೆ.ಆರ್.ಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಚಿಯ ಗಾಂಧಿನಗರದ ರಾಜು ಅಲಿಯಾಸ್ ಚಿನ್ನುಕುಮಾರ್ (32) ಬಂಧಿತ.
ಜನರ ಗಮನ ಬೇರೆಡೆ ಸೆಳೆದು ನಗದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ‘ಓಜಿಕುಪ್ಪಂ ಗ್ಯಾಂಗ್’ನಲ್ಲಿ ರಾಜು ಗುರುತಿಸಿಕೊಂಡಿದ್ದ. ಆರೋಪಿಯಿಂದ ₹4 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಹೊರಮಾವು ಅಗ್ರಹಾರ ಪ್ರಕಾಶ್ ಗಾರ್ಡನ್‌ನಲ್ಲಿ ನೆಲಸಿದ್ದ ವ್ಯಕ್ತಿಯೊಬ್ಬರು, ಕಳೆದ ವರ್ಷದ ಡಿ.19ರಂದು ರಾಮಮೂರ್ತಿನಗರದ ‘ಡಿ’ ಮಾರ್ಟ್ ಬಳಿಯ ಬ್ಯಾಂಕ್‌ವೊಂದರಿಂದ ₹5 ಲಕ್ಷ ಡ್ರಾ ಮಾಡಿಕೊಂಡು ಸ್ಕೂಟರ್‌ನಲ್ಲಿ ಇಟ್ಟುಕೊಂಡು ಕೆಆರ್ ಪುರದ ಟಿಸಿ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿಗೆ ಬಂದಿದ್ದರು. ಕಾರ್ಮಿಕರಿಗೆ ಕೊಡಲು ಡ್ರಾ ಮಾಡಿದ್ದ ಹಣದ ಪೈಕಿ ₹50 ಸಾವಿರವನ್ನು ತೆಗೆದುಕೊಂಡು, ಉಳಿಕೆ ಹಣವನ್ನು ಸ್ಕೂಟರ್‌ನಲ್ಲೇ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಇರಲಿಲ್ಲ ಎಂದು ಪೊಲೀಸರು ಹೇಳಿದರು.
ತಮಿಳುನಾಡಿನ ತಿರುಚಿಯ ಗಾಂಧಿನಗರದ ಸುಳ್ಳುಕೋವಿಲ್ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಕೆಂಗೇರಿಯ ಐವರು ಸಹಚರರೊಂದಿಗೆ ಸೇರಿಕೊಂಡು ಹಣ ದೋಚಿ ಪರಾರಿ ಆಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ವರ್ಷದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳವು ಮಾಡಿದ್ದ ಹಣವನ್ನು ಕೋರಮಂಗಲದಲ್ಲಿ ವಾಸವಿರುವ ಪರಿಚಯಸ್ಥರಿಗೆ ನೀಡಿರುವುದಾಗಿ ಆರೋಪಿ ತಿಳಿಸಿದ್ದ. ಅವರಿಂದ ₹4 ಲಕ್ಷ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.