ADVERTISEMENT

ಜಾತಿ ನಿಂದನೆ ಆರೋಪ: ಎಚ್‌.ಎಂ. ರೇವಣ್ಣ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 19:47 IST
Last Updated 18 ಮಾರ್ಚ್ 2025, 19:47 IST
ಎಚ್‌.ಎಂ. ರೇವಣ್ಣ
ಎಚ್‌.ಎಂ. ರೇವಣ್ಣ   

ಬೆಂಗಳೂರು: ‘ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ತಮ್ಮ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತೆ ನಂದಿನಿ ನಾಗರಾಜ್ ಅವರು ಹೈಗ್ರೌಂಡ್ಸ್‌ ಪೊಲೀಸ್ ಠಾಣೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು‌ ನೀಡಿದ್ದಾರೆ.

ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಮಂಗಳವಾರ ದೂರು ನೀಡಿರುವ ನಂದಿನಿ, ‘ರೇವಣ್ಣ ಅವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ದಲಿತ ಮಹಿಳೆಯಾದ ನನಗೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.  

ನಾಗಲಕ್ಷ್ಮಿ ಚೌಧರಿ ಅವರು ಮಾತನಾಡಿ, ‘ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ನೀಡುವಂತೆ ಸ್ಥಳೀಯ ಡಿಸಿಪಿಗೆ ಪತ್ರ ಬರೆಯಲಾಗುವುದು. ಮಹಿಳಾ ಆಯೋಗದಲ್ಲಿ ಪಕ್ಷಗಳ ವಿಚಾರ ಬರುವುದಿಲ್ಲ. ಇಲ್ಲಿ ಹೆಣ್ಣು ಎಂಬುದು ಮಾತ್ರ ಮುಖ್ಯ, ಮಹಿಳೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ರೇವಣ್ಣ ಅವರಿಗೂ ಪತ್ರ ಬರೆದು ಸ್ಪಷ್ಟನೆ ಕೇಳುತ್ತೇನೆ’ ಎಂದು ತಿಳಿಸಿದರು. 

ADVERTISEMENT

‘ಪ್ರಕರಣದ ತನಿಖೆ ಕೈಗೊಳ್ಳಬೇಕಾಗಿರುವ ಕಾರಣ, ದೂರಿಗೆ ಸಂಬಂಧಪಟ್ಟಂತೆ ದಾಖಲೆ ಮತ್ತು ಸಾಕ್ಷ್ಯಾಧಾರ ಒದಗಿಸುವಂತೆ ದೂರುದಾರರಿಗೆ ಸೂಚಿಸಿ, ನೋಟಿಸ್ ನೀಡಲಾಗಿದೆ’ ಎಂದು ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ತಿಳಿಸಿದರು.

‘ಪೊಲೀಸರು ಮತ್ತು ಆಯೋಗಕ್ಕೆ ದೂರು ನೀಡಿದ ಬಳಿಕ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ರೇವಣ್ಣ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ನನಗೆ ರಕ್ಷಣೆ ಒದಗಿಸಬೇಕು’ ಎಂದು ನಂದಿನಿ ಮನವಿ ಮಾಡಿದ್ದಾರೆ. 

ಪ್ರಕರಣದ ಹಿನ್ನೆಲೆ: ‘ಕುಮಾರಕೃಪಾ ಅತಿಥಿಗೃಹದಲ್ಲಿದ್ದ ಎಚ್‌.ಎಂ. ರೇವಣ್ಣ ಅವರನ್ನು ಭೇಟಿಮಾಡಲು ಹೋಗಿದ್ದೆ. ಆಗ ನನಗೆ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿ, ನನ್ನ ಬೆರಳು ಮುರಿದಿದ್ದಾರೆ’ ಎಂದು ನಂದಿನಿ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.