ADVERTISEMENT

ಹಿಂದೂ ಸಮುದಾಯ ಒಡೆಯಲು ಸಮೀಕ್ಷೆ: ಪೂರ್ಣಾನಂದ ಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 16:09 IST
Last Updated 4 ಜುಲೈ 2025, 16:09 IST
ಪೂರ್ಣಾನಂದ ಪುರಿ ಶ್ರೀಗಳು
ಪೂರ್ಣಾನಂದ ಪುರಿ ಶ್ರೀಗಳು   

ಬೆಂಗಳೂರು: ‘ಸರ್ಕಾರವು ಸಮೀಕ್ಷೆ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಕೆಲಸ ಮಾಡಬಾರದು’ ಎಂದು ತೈಲೇಶ್ವರ ಗಾಣಿಗರ ಸಂಸ್ಥಾನದ ‍ಪೀಠಾಧ್ಯಕ್ಷ ಪೂರ್ಣಾನಂದ ಪುರಿ ಸ್ವಾಮೀಜಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ಸಮುದಾಯಗಳಿಗೆ ಅನುಕೂಲ ಮಾಡಿಕೊಡಲು, ಹಿಂದೂ ಸಮುದಾಯದ ಒಗ್ಗಟ್ಟು ಒಡೆಯಲು ಕಾಂಗ್ರೆಸ್‌ ಸರ್ಕಾರವು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. ಎಚ್. ಕಾಂತರಾಜು ಮತ್ತು ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ನಡೆಸಲಾದ ಈ ಸಮೀಕ್ಷಾ ವರದಿ ಪಾರದರ್ಶಕವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಹಿತಕ್ಕಾಗಿ, ಕೆಲವು ಸಮುದಾಯಗಳಿಗೆ ಅನುಕೂಲ ಮಾಡಿಕೊಡಲು ಜಾತಿ ಗಣತಿ ಸೃಷ್ಟಿ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹಿಂದೂ ಸಮುದಾಯದ ಒಳಪಂಗಡಗಳಲ್ಲಿ ದ್ವೇಷ ಹುಟ್ಟಿಸಿ, ಮುಸ್ಲಿಂ ಪಂಗಡದಲ್ಲಿ ಒಗ್ಗಟ್ಟು ಮೂಡಿಸುವ ಷಡ್ಯಂತ್ರ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇನ್ನು ಮುಂದೆ ಸಮೀಕ್ಷೆಗೆ ನಿರ್ದಿಷ್ಟ ಅಳತೆಗೋಲನ್ನು ನಿರ್ಧರಿಸಿ, ಒಳಪಂಗಡದ ಗೋಜಿಗೆ ಹೋಗಬಾರದು. ಜಾತಿಗಳ ಆಧಾರದ ಮೇಲೆ ಅಂಕಿ–ಅಂಶಗಳ ದತ್ತಾಂಶ ಪಡೆಯಬೇಕು. ಎಲ್ಲ ಮೀಸಲಾತಿಯ ಅರ್ಹರಿಗೆ ಕೆನೆ ಪದರದ ಮಿತಿಯನ್ನು ಜಾರಿಗೊಳಿಸಬೇಕು. ಮೀಸಲಾತಿಯಿಂದ ಆಯಾ ಸಮುದಾಯಗಳು ಪಡೆದಿರುವ ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಇತರೆ ಲಾಭಾಂಶಗಳ ಅಂಕಿ ಸಂಖ್ಯೆ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು. 

ADVERTISEMENT

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿವಿಧ ಸಂಘ–ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಪಾರದರ್ಶಕತೆಯೂ ಇಲ್ಲವಾಗಿದೆ. ಮಠದ ಸರ್ವಾಂಗೀಣ ಅಭಿವೃದ್ಧಿಗೆ ವಿಶ್ವ ಗಾಣಿಗರ ಸಮುದಾಯ ಚಾರಿಟಬಲ್‌ ಟ್ರಸ್ಟ್‌ಗೆ ಹಿಂದಿನ ಸರ್ಕಾರವು ₹ 3.5 ಕೋಟಿಗೆ ಮಂಜೂರಾತಿ ನೀಡಿ ಆದೇಶಿಸಿತ್ತು. ಈ ಅನುದಾನಕ್ಕೆ ಕಾನೂನು ಹೋರಾಟ ನಡೆಸಬೇಕಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.