ADVERTISEMENT

ಬೆಂಗಳೂರಿನಲ್ಲೂ 20ರಿಂದ ಜಾತಿವಾರು ಸಮೀಕ್ಷೆ: ಡಾ.ಜಿ.ಜಗದೀಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 23:40 IST
Last Updated 1 ಸೆಪ್ಟೆಂಬರ್ 2025, 23:40 IST
ಜಿ.ಜಗದೀಶ್‌
ಜಿ.ಜಗದೀಶ್‌   

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲೂ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಇದೇ 12 ರೊಳಗಾಗಿ ಜಿಯೋ ಟ್ಯಾಗಿಂಗ್ ಮುಗಿಸುವಂತೆ ಜಿಲ್ಲಾಧಿಕಾರಿ ಡಾ.ಜಿ.ಜಗದೀಶ ಸೂಚಿಸಿದರು.

ಜಿಲ್ಲಾ ಮಟ್ಟದ ಗಣತಿ ಸಮನ್ವಯ ಸಮಿತಿ ಸದಸ್ಯರೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಒಟ್ಟು ಜನಸಂಖ್ಯೆ ಮತ್ತು ವಲಸೆ ಬಂದಿರುವ ಜನರ ಸಮೀಕ್ಷೆ ನಡೆಸುವ ಬಗ್ಗೆ ದ್ವಂದ್ವ ಇದೆ. ಈ ಸಂಬಂಧ ಸಂಪೂರ್ಣ ಮಾರ್ಗಸೂಚಿ ಈವರೆಗೂ ಸಿದ್ಧವಾಗಿಲ್ಲದ ಕಾರಣ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಪಡೆಯುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 70 ಲಕ್ಷ ವಿದ್ಯುತ್ ಸಂಪರ್ಕಗಳು ಇವೆ. ಅವುಗಳಲ್ಲಿ ಶೇ 20ರಷ್ಟು ಮಾತ್ರ ಜಿಯೋ ಟ್ಯಾಗಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದು ಬೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ADVERTISEMENT

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ‌ಆರ್‌. ಯತೀಶ್ ಮಾತನಾಡಿ, ಜಿಯೋ ಟ್ಯಾಗಿಂಗ್ ರೀತಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿಯೋಜಿಸಿರುವ ಕಡಿಮೆ ಗಣತಿದಾರರಿಂದ ಸಮೀಕ್ಷೆ ಪೂರ್ಣಗೊಳಿಸಲು ಸಮಯದ ಅಭಾವ ಎದುರಾಗಬಹುದು ಎಂದು ಗಮನಕ್ಕೆ ತಂದರು.

ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಹೆಚ್ಚಿನ ಗಣತಿದಾರರನ್ನು ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಗದೀಶ್‌ ಸೂಚಿಸಿದರು.

ಅಲೆಮಾರಿಗಳು ಹೊರಗುಳಿಯದಿರಲಿ: ಆನೇಕಲ್ ತಾಲ್ಲೂಕಿನ ಹಕ್ಕಿಪಿಕ್ಕಿ ಕಾಲೋನಿ ಹಾಗೂ ರಾಗಿಹಳ್ಳಿಯಲ್ಲಿ ವಾಸಿಸುವ ಪ್ರದೇಶಗಳು ನೆಟ್ ವರ್ಕ್‌ನಿಂದ ವಂಚಿತವಾಗಿವೆ. ಕೆಲವು ಸ್ಲಂ ಪ್ರದೇಶಗಳಲ್ಲಿಯೂ ಅಧಿಕೃತ ವಿದ್ಯುತ್ ಸಂಪರ್ಕ ಇಲ್ಲದಿದ್ದು, ಇಂತಹ ಪ್ರದೇಶಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದು ಜಗದೀಶ್‌ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವಿಶ್ವನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಿರುಪಮಾ ಮೌಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.