ADVERTISEMENT

ಕಾವೇರಿ 5ನೇ ಹಂತ: ಶೇ 40ರಷ್ಟೂ ಬಳಕೆ ಇಲ್ಲ; ನೀರು ಸರಬರಾಜು ಸಂಪರ್ಕಕ್ಕೆ ಅಡ್ಡಿ

ಮಾಹಿತಿ ಕೊರತೆ, ಮಧ್ಯವರ್ತಿಗಳ ಹಾವಳಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಕಾವೇರಿ 5ನೇ ಹಂತದ ಯೋಜನೆಯ ಮುಖ್ಯ ಘಟಕ.
ಕಾವೇರಿ 5ನೇ ಹಂತದ ಯೋಜನೆಯ ಮುಖ್ಯ ಘಟಕ.   

ಬೆಂಗಳೂರು: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪೂರ್ಣ ಕಾವೇರಿ ನೀರು ಒದಗಿಸಲು ಜಲಮಂಡಳಿ ಆರಂಭಿಸಿರುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಜಾರಿಗೊಂಡು ಒಂದು ವರ್ಷವಾದರೂ ಶೇ 40ರಷ್ಟು ನೀರನ್ನು ಜನ ಬಳಕೆ ಮಾಡಿಕೊಂಡಿಲ್ಲ. 

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆಲ್ಲ ಕುಡಿಯುವ ನೀರು ಒದಗಿಸಲು, ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯಿಂದ(ಜೈಕಾ) ₹4,300 ಕೋಟಿ ಸಾಲ ಪಡೆದು ಈ ಯೋಜನೆ ಜಾರಿಗೊಳಿಸಿ 14 ತಿಂಗಳು ಕಳೆದಿವೆ.

ಯೋಜನೆ ಸಂಪೂರ್ಣ ಜಾರಿಗೆ 2028ರವರೆಗೂ ಅವಕಾಶವಿದೆ. ಅಷ್ಟರೊಳಗೆ ಸಂಪರ್ಕ ಪ್ರಮಾಣ ಪೂರ್ಣಗೊಳಿಸುವ ಗುರಿಯನ್ನು ಜಲಮಂಡಳಿ ಹೊಂದಿದ್ದರೂ, ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ಸಂಪರ್ಕ ಕಲ್ಪಿಸಲು ಆಗಿಲ್ಲ. ಇದರಿಂದ ನೀರಿನ ಲಭ್ಯತೆಗೆ ಹೋಲಿಸಿದರೆ ಬಳಕೆ ಪ್ರಮಾಣ ಕಡಿಮೆಯಾಗಿದೆ.

ADVERTISEMENT

ದುಬಾರಿ ಸಂಪರ್ಕ ಶುಲ್ಕ, ಅಗತ್ಯ ಮಾಹಿತಿ ಅಲಭ್ಯ, ಮಧ್ಯವರ್ತಿಗಳ ಹಾವಳಿಯ ಆರೋಪಗಳಿಂದ ಹೆಚ್ಚಿನ ಜನ, ಅಧಿಕೃತವಾಗಿ ನೀರಿನ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಪೈಪ್‌ಲೈನ್‌ ಬಹುತೇಕ ಪೂರ್ಣ: ನಗರದಾದ್ಯಂತ ಸ್ಟೀಲ್ ಟ್ರಂಕ್ ರೂಪಿಸಿ ಮುಖ್ಯ ಪೈಪ್‌ಲೈನ್ ಅಳವಡಿಸಲಾಗಿದೆ. ಗೊಟ್ಟಿಗೆರೆ, ದೊಡ್ಡಕನಹಳ್ಳಿ, ಲಿಂಗಧೀರನಹಳ್ಳಿ, ಎಸ್‌ಎಂವಿ 6ನೇ ಬ್ಲಾಕ್‌ಗಳಲ್ಲಿ ಸಂಗ್ರಹಗಾರಗಳನ್ನೂ ನಿರ್ಮಿಸಲಾಗಿದೆ. ಇಲ್ಲಿಂದ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಯಶವಂತಪುರ, ಟಿ.ದಾಸರಹಳ್ಳಿ, ಬ್ಯಾಟರಾಯನಪುರ, ಮಹದೇವಪುರ, ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರಗಳ ಪ್ರದೇಶಗಳಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಪ್ರಮುಖ ಬಡಾವಣೆಗಳು ಹಾಗೂ 100 ಹಳ್ಳಿಗಳಿಗೆ ನೀರಿನ ಸಂಪರ್ಕ ಜಾಲ ಸೃಷ್ಟಿಸಲಾಗಿದೆ. ಆದರೆ ಕಾಡುಗೋಡಿ ಮತ್ತು ಚೊಕ್ಕನಹಳ್ಳಿ ಸಂಗ್ರಹಗಾರ ನಿರ್ಮಾಣ ಪ್ರಕ್ರಿಯೆ ಭೂವ್ಯಾಜ್ಯದಿಂದ ವಿಳಂಬವಾಗಿ ಈ ಭಾಗದ 10 ಹಳ್ಳಿಗಳಿಗೆ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. 

‘ಹೊಸದಾಗಿ ಜಲ ಸಂಪರ್ಕ ಪಡೆಯುವವರ ಪ್ರಮಾಣವೇ ಕೊಂಚ ಕಡಿಮೆಯಿದೆ. ನೀರು ಲಭ್ಯ ಇರುವಷ್ಟು ಬಳಕೆಯಾಗುತ್ತಿಲ್ಲ. ಸಂಪರ್ಕ, ಅಕ್ರಮವಿದ್ದರೆ ಸಕ್ರಮ ಮಾಡಿಕೊಳ್ಳಲು ಜಲಮಂಡಳಿ ಜಾಗೃತಿ ಮೂಡಿಸುತ್ತಿದೆ. 2026ರಲ್ಲಿ ಸಂಪರ್ಕ ಪ್ರಮಾಣ, ನೀರಿನ ಬಳಕೆ ಪ್ರಮಾಣ ಹೆಚ್ಚಬಹುದು’ ಎಂದು ಪ್ರಧಾನ ಎಂಜಿನಿಯರ್‌ ಬಿ.ಎಸ್.ದಲಾಯತ್‌ ತಿಳಿಸಿದರು.

ಸಮಸ್ಯೆಯ ಸ್ವರೂಪ: ತಿಂಗಳ ಹಿಂದೆಯೇ ಮನೆ ಕಟ್ಟಿ ಮುಗಿಸಿರುವ ರಮೇಶ್‌, ‘ಆನ್‌ಲೈನ್‌ನಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರಯತ್ನಿಸಿದಾಗ ಮಾಹಿತಿ ಸಿಗಲಿಲ್ಲ. ಮಧ್ಯವರ್ತಿಗಳು ಏನೇನೋ ಹೇಳಿ, ಸಾವಿರಾರು ರೂಪಾಯಿ ಕೇಳುತ್ತಿದ್ದಾರೆ’ ಎಂದು ದೂರಿದರು.

‘ಸಂಪರ್ಕ ಪಡೆಯಲು ‌ವಿಚಾರಿಸಿದರೆ ₹50 ಸಾವಿರ ನೀಡಬೇಕು ಎಂದು ಮಧ್ಯವರ್ತಿಗಳು ಬೇಡಿಕೆ ಇಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಮಧ್ಯವರ್ತಿಗಳ ಹಾವಳಿಗೆ ತಡೆ ಹಾಕಿ ಮನೆ ಮನೆ ಸಮೀಕ್ಷೆ ನಡೆಸಬೇಕು. ಜನಸಾಮಾನ್ಯರಿಗೆ ವ್ಯವಸ್ಥೆ ಸರಳಗೊಳಿಸಬೇಕು’ ಎಂದು ಲಗ್ಗೆರೆಗೆ ಹೊಂದಿಕೊಂಡಂತಿರುವ ನರಸಿಂಹಸ್ವಾಮಿ ಲೇಔಟ್‌ನ ಕರಿಷ್ಮಾ ಹೇಳಿದರು.

‘ಕೆಲವು ಬಡಾವಣೆಗಳಲ್ಲಿ ಹೆಚ್ಚು ನೀರಿನ ಶುಲ್ಕ ಭರಿಸಬೇಕು, ಠೇವಣಿ, ಇತರೆ ಶುಲ್ಕಗಳನ್ನು ಪಾವತಿಸಬೇಕು ಎಂದು ಕೆಲವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಜಲಮಂಡಳಿ ಗುರಿ ನಿಗದಿಪಡಿಸಿ ಉಪವಿಭಾಗ ಮಟ್ಟದಲ್ಲಿ ಜಾಗೃತಿ ಶಿಬಿರ ಆಯೋಜಿಸಿ ಗೊಂದಲ ಬಗೆಹರಿಸಲು ಪ್ರಯತ್ನಿಸುತ್ತಿದೆ’ ಎಂದು ಜಲಮಂಡಳಿ ಎಂಜಿನಿಯರ್‌ಗಳು ಹೇಳಿದರು.

ಬೆಂಗಳೂರು ಜಲಮಂಡಳಿ ಕಚೇರಿ
ರಾಮ್‌ಪ್ರಸಾತ್ ಮನೋಹರ್

775 ಎಂಎಲ್‌ಡಿ; ಕಾವೇರಿ 5ನೇ ಹಂತದಲ್ಲಿ ಲಭ್ಯವಿರುವ ನೀರು 

300 ಎಂಎಲ್‌ಡಿ; ಬಳಕೆಯಾಗುತ್ತಿರುವ ನೀರು

4 ಲಕ್ಷ; ಹೊಸ ಸಂಪರ್ಕದ ಗುರಿ 

1 ಲಕ್ಷ; ಡಿಸೆಂಬರ್‌ ಅಂತ್ಯಕ್ಕೆ ನೀಡಲಾಗಿರುವ ಸಂಪರ್ಕ

ಟ್ಯಾಂಕರ್‌ಗಿಂತ ದರ ಕಡಿಮೆ

ಟಿ.ದಾಸರಹಳ್ಳಿ ಹಾಗೂ ಸುತ್ತಮುತ್ತಲಿನ ಕೆಲವು ಬಡಾವಣೆಗಳ ಜನ ಎರಡು ದಶಕದಿಂದ ನೆಲಸಿದ್ದರೂ ಬೋರ್‌ವೆಲ್ ನೀರನ್ನು ಅವಲಂಬಿಸಿದ್ದರು. ಈಗ ಆ ಸಮಸ್ಯೆ ದೂರವಾಗಿ ಕಾವೇರಿ ನೀರು ಬಳಸುತ್ತಿದ್ದಾರೆ.  ‘ನಮ್ಮದೇ ಎರಡು ಮಹಡಿ ಮನೆ ಇದೆ. ತಿಂಗಳಿಗೆ 18 ಸಾವಿರ ಲೀಟರ್ ನೀರು ಬಳಸುತ್ತಿದ್ದೇವೆ. ಇದಕ್ಕೆ ತಿಂಗಳಿಗೆ ₹700 ವರೆಗೂ ಬಿಲ್‌ ಬರುತ್ತದೆ. ಹಿಂದೆಲ್ಲಾ ಬರೀ 5 ಸಾವಿರ ಲೀಟರ್‌ ಟ್ಯಾಂಕರ್‌ ನೀರಿಗೆ ₹800 ಪಾವತಿಸುತ್ತಿದ್ದೆವು. ಈಗ ಕಾವೇರಿ ನೀರಿನ ಸಂಪರ್ಕ ಪಡೆದಿರುವುದರಿಂದ ಹೊರೆಯೇನೂ ಅನ್ನಿಸುತ್ತಿಲ್ಲ’ ಎಂದು ಸೌಂದರ್ಯ ನಗರದ ನಿವಾಸಿ ಶೈಲಾ ರಮೇಶ್‌ ತಿಳಿಸಿದರು.

‘ನೇರವಾಗಿ ಸಂಪರ್ಕಿಸಿ’

‘ನಗರದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಬಯಸುವ ಜನರು ನೇರವಾಗಿ ಜಲಮಂಡಳಿಯ ಕಚೇರಿಗೆ ಭೇಟಿ ನೀಡಬೇಕು. ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಅಲ್ಲದೆ ಆನ್‌ಲೈನ್‌ನಲ್ಲೇ (https://owc.bwssb.gov.in/) ಅರ್ಜಿ ಸಲ್ಲಿಸುವ ಅವಕಾಶವನ್ನು ಜಲಮಂಡಳಿ ನೀಡಿದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು. ‘ಠೇವಣಿಯನ್ನು ಇಎಂಇ ಮೂಲಕ ಪಾವತಿಸಲೂ ಅವಕಾಶವಿದೆ. ಜನಸ್ನೇಹಿ ವ್ಯವಸ್ಥೆ ಮಾಡುತ್ತೇವೆ. ಕೆಲವು ಕಡೆ ಯೋಜನೆ ಅನಿವಾರ್ಯ ಕಾರಣಗಳಿಂದ ಸಂಪರ್ಕ ನೀಡುವುದು ವಿಳಂಬವಾಗಿದೆ. ಅದನ್ನೂ ಶೀಘ್ರ ಪರಿಹರಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.