ಬೆಂಗಳೂರು: ಮನೆಗಳಿಗೆ ಸಮರ್ಪಕವಾಗಿ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ಕೆಲವು ಮನೆಗಳಿಗೆ ನಿಗದಿತ ಸಮಯದಲ್ಲೂ ನೀರು ಬಿಡುತ್ತಿಲ್ಲ. ಠೇವಣಿ ಪಾವತಿಸಿ ನೀರಿನ ಸಂಪರ್ಕ ಪಡೆದರೂ, ಹಣ ತೆತ್ತು ಟ್ಯಾಂಕರ್ ನೀರು ಖರೀದಿಸುವುದು ತಪ್ಪಿಲ್ಲ!
ಇದು ಬೆಂಗಳೂರು ಪೂರ್ವ ತಾಲ್ಲೂಕಿನ ಹೊರಮಾವು ವ್ಯಾಪ್ತಿಯ ಬಂಜಾರ ಬಡಾವಣೆ, ಕಲ್ಕೆರೆ, ಪುಣ್ಯಭೂಮಿ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಬೇಸರದ ನುಡಿಗಳು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ಈ ಬಡಾವಣೆಗಳಿವೆ. ಕೆಲವರು ಕಳೆದ ಮಾರ್ಚ್–ಏಪ್ರಿಲ್ ತಿಂಗಳಲ್ಲಿ ಜಲಮಂಡಳಿ ನಡೆಸಿದ ‘ಕಾವೇರಿ ನೀರು ಸಂಪರ್ಕ’ ಅಭಿಯಾನದ ಸಂದರ್ಭದಲ್ಲಿ ಠೇವಣಿ ಪಾವತಿಸಿ ನೀರಿನ ಸಂಪರ್ಕ ಪಡೆದಿದ್ದಾರೆ. ಇನ್ನೂ ಕೆಲವರು ಒಂದೂವರೆ ತಿಂಗಳ ಹಿಂದೆ ಸಂಪರ್ಕ ಪಡೆದಿದ್ದಾರೆ. ‘ಆದರೆ ಅನೇಕ ಮನೆಗಳಿಗೆ ಸಮಪರ್ಕವಾಗಿ ನೀರು ಪೂರೈಕೆಯಾಗುತ್ತಿಲ್ಲ’ ಎಂಬುದು ನಿವಾಸಿಗಳ ದೂರು.
‘ದೊಡ್ಡಕೆಂಪೇಗೌಡ ಬಡಾವಣೆ, ಪುಣ್ಯಭೂಮಿ ಲೇಔಟ್, ಬಂಜಾರ ಬಡಾವಣೆ ಮತ್ತು ಗೋಲ್ಡನ್ ಎನ್‌ಕ್ಲೇವ್‌ನಲ್ಲಿ ಒಂದಷ್ಟು ಮನೆಗಳಿಗೆ ಕಾವೇರಿ ನೀರು ವಾರಕ್ಕೆ ಒಂದು ದಿನ ಬರುತ್ತದೆ. ಕೆಲವು ರಸ್ತೆಗಳಲ್ಲಿ ಅದೂ ಇಲ್ಲ. ಪೂರೈಕೆಯಾಗುವ ನೀರಿನ ಪ್ರಮಾಣ ತುಂಬಾ ಕಡಿಮೆ. ಹೀಗಾಗಿ ಹಣ ತೆತ್ತು ಟ್ಯಾಂಕರ್ ನೀರು ಖರೀದಿಸುವುದು ತಪ್ಪಿಲ್ಲ’ ಎಂದು ಕಲ್ಕೆರೆ ನಿವಾಸಿ ಕುಮಾರ್ ಹೇಳಿದರು.
‘ಮನೆಗೆ ಕಾವೇರಿ ನೀರಿನ ಸಂಪರ್ಕ ಪಡೆದ ದಿನದಿಂದಲೂ ಈ ಸಮಸ್ಯೆ ಇದೆ. ಆರಂಭದಲ್ಲಂತೂ ನೀರೇ ಬರುತ್ತಿರಲಿಲ್ಲ. ದೂರು ನೀಡಿದ ನಂತರ, ವಾರಕ್ಕೊಮ್ಮೆ ಸಣ್ಣದಾಗಿ ನೀರು ಬರುತ್ತಿತ್ತು. ಈಗ 15 ದಿನಗಳಿಗೊಮ್ಮೆಯೂ ನೀರು ಬರುತ್ತಿಲ್ಲ. ಈ ಬಗ್ಗೆ ಜಲಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಸಮಸ್ಯೆ ಬಗೆಹರಿದಿಲ್ಲ’ ಎಂದು ಬಂಜಾರ ಬಡಾವಣೆಯ ನಿವಾಸಿ ಸೌಭಾಗ್ಯ ಸಮಸ್ಯೆಯನ್ನು ವಿವರಿಸಿದರು.
‘ನಮ್ಮ ಪಕ್ಕದ ರಸ್ತೆಯ ಮನೆಗಳಿಗೆ ನೀರು ಬರುತ್ತದೆ, ನಮ್ಮ ರಸ್ತೆಯ ಮನೆಗಳಿಗೆ ಬರುವುದಿಲ್ಲ. ಕಾರಣ ಏನೆಂದೂ ಹೇಳುವುದಿಲ್ಲ. ನೀರು ಬಂದು 15–20 ದಿನಗಳಾಯಿತು. ವಾಲ್‌ಮೆನ್‌ಗಳಿಂದ ಹಿಡಿದು ಎಲ್ಲ ಹಂತದ ಸಿಬ್ಬಂದಿಗೂ ತಿಳಿಸಿದ್ದೇವೆ. ಅವರು ದೂರು ದಾಖಲಿಸಿ ಕೊಂಡಿದ್ದೇವೆ ಎನ್ನುತ್ತಾರೆ, ನೀರು ಮಾತ್ರ ಬರುವುದಿಲ್ಲ’ ಎಂದು ಪುಣ್ಯಭೂಮಿ ಬಡಾವಣೆಯ ನಿವಾಸಿ ರಾಜು ದೂರಿದರು. ‘ನಮಗೆ ತಿಂಗಳಿಗೆ ಎಂಟು ಟ್ಯಾಂಕರ್ ನೀರು ಬೇಕು. ಜಲಮಂಡಳಿಗೆ ಠೇವಣಿಯನ್ನೂ ಕಟ್ಟಿ, ಈ ಕಡೆ ಟ್ಯಾಂಕರ್‌ಗೂ ಹಣ ಕೊಡುವುದು ಕಷ್ಟ’ ಎಂದು ಬೇಸರ ವ್ಯಕ್ತಪಡಿಸಿದರು.
‘ನಮ್ಮ ಮನೆಗೆ ತಿಂಗಳಿಗೆ ಐದು ಸಾವಿರ ಲೀಟರ್ ಸಾಮರ್ಥ್ಯದ ಎಂಟು ಟ್ಯಾಂಕರ್‌ಗಳಷ್ಟು ನೀರು ಬೇಕು. ಕಾವೇರಿ ನೀರಿನ ಸಂಪರ್ಕ ಪಡೆದ ಮೇಲೆ ಎರಡು ಟ್ಯಾಂಕರ್ ನೀರು ಕಡಿಮೆ ಮಾಡಿದ್ದೆ. ಅಂದರೆ ತಿಂಗಳಿಗೆ 10 ಸಾವಿರ ಲೀಟರ್ ಅಷ್ಟೇ ಬರುತ್ತಿರುವುದು. ಅದೂ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಿದ್ದಾಗ, ಕಾವೇರಿ ನೀರು ಯಾಕೆ ಬೇಕು’ ಎಂದು ನಿವಾಸಿಯೊಬ್ಬರು ಪ್ರಶ್ನಿಸಿದರು.
* ಅಸಮರ್ಪಕ ನೀರು ಪೂರೈಕೆ: ದೂರು * ತಪ್ಪದ ಟ್ಯಾಂಕರ್ ನೀರಿನ ಅವಲಂಬನೆ * ನಿಗದಿತ ದಿನ, ಸಮಯದಲ್ಲಿ ನೀರು ಪೂರೈಸಿ
ನೀರು ಹಣ ವ್ಯರ್ಥ
ಜಲಮಂಡಳಿಯವರು ವಾರಕ್ಕೆ ಎರಡು ದಿನ ಕಾವೇರಿ ನೀರು ಬಿಡುತ್ತೇವೆಂದು ಹೇಳುತ್ತಾರೆ. ಅದು ಯಾವ ದಿನ ಯಾವ ಸಮಯ ಎಂದು ಸರಿಯಾಗಿ ಹೇಳುವುದಿಲ್ಲ. ಒಮ್ಮೊಮ್ಮೆ ನಾವು ಟ್ಯಾಂಕರ್ ನೀರು ಹಾಕಿಸಿಕೊಂಡ ದಿನವೇ ಕಾವೇರಿ ನೀರು ಬಿಡುತ್ತಾರೆ. ಇದರಿಂದ ನಮಗೆ ಹಣ ವ್ಯರ್ಥವಾಗುತ್ತದೆ. ನಿಗದಿತ ಸಮಯದಲ್ಲಿ ನೀರು ಪೂರೈಕೆ ಮಾಡದಿದ್ದರೆ ನೀರು ವ್ಯರ್ಥವಾಗುವ ಸಾಧ್ಯತೆಯೂ ಹೆಚ್ಚು ಎಂದು ಬಂಜಾರ ಪಡಾವಣೆ ನಿವಾಸಿ ಇಂದಿರಾ ಬೆನಕನಹಳ್ಳಿ ಸಮಸ್ಯೆಯ ಇನ್ನೊಂದು ಮಗ್ಗಲನ್ನು ವಿವರಿಸಿದರು.
ಬಂಜಾರ ಬಡಾವಣೆ ಸೇರಿದಂತೆ ಕೆಲವು ಕಡೆಗಳಲ್ಲಿ ಮುಖ್ಯ ಕೊಳವೆಗಳೊಂದಿಗಿನ ಸಂಪರ್ಕ ತಪ್ಪಿರುತ್ತದೆ(ಮಿಸ್ಸಿಂಗ್ ಲಿಂಕ್). ನೀರಿನ ಸೋರಿಕೆ ಸಮಸ್ಯೆಯೂ ಇದೆ. ಎಲ್ಲವನ್ನೂ ಹಂತ ಹಂತವಾಗಿ ಸರಿಪಡಿಸುತ್ತಿದ್ದೇವೆ. ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿರುವ ಕುರಿತು ಜಲಮಂಡಳಿಗೆ ಮಾಹಿತಿ ನೀಡಿದರೆ ತಕ್ಷಣ ಬಗೆಹರಿಸುತ್ತೇವೆ.ಜಲಮಂಡಳಿ ಅಧಿಕಾರಿಗಳು ಬೆಂಗಳೂರು ಪೂರ್ವ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.