
ಬೆಂಗಳೂರು: ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಸಿಬಿಐ ಕಚೇರಿಯ ಹೆಡ್ ಕಾನ್‌ಸ್ಟೆಬಲ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ.
ಗಂಗಾ ನಗರ ನಿವಾಸಿ, ಹೆಡ್‌ಕಾನ್‌ಸ್ಟೆಬಲ್ ಎನ್.ಕೃಷ್ಣ ಅವರು ನೀಡಿದ ದೂರಿನ ಮೇಲೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.
ಕೆಲಸದ ನಿಮಿತ್ತ ದೆಹಲಿಗೆ ತೆರಳಲು ಎನ್.ಕೃಷ್ಣ ಅವರು ಫೆಬ್ರುವರಿ 16ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಿ.ಬಿ.ಎಸ್ ಬಸ್ ಸ್ಟಾಪ್ ಹತ್ತಿರ ನಿಂತಿದ್ದರು. ಬಸ್ ಬರಲು ತಡವಾದ ಕಾರಣ ಟ್ಯಾಕ್ಸಿ ಬುಕ್ ಮಾಡಲು ಮೊಬೈಲ್ ಹೊರ ತೆಗೆಯುತ್ತಿದ್ದಂತೆ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ರಸ್ತೆಯಲ್ಲಿ ಹೋಗುತ್ತಿದ್ದ ಬೇರೆಯವರ ಮೊಬೈಲ್ ಪಡೆದು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ದೆಹಲಿಯಿಂದ ವಾಪಸ್ ಬಂದ ಬಳಿಕ ಫೆಬ್ರುವರಿ 19ರಂದು ಠಾಣೆಗೆ ಬಂದು, ಮೊಬೈಲ್ ಕಿತ್ತುಕೊಂಡು ಹೋಗಿರುವ ಅಪರಿಚಿತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.