ADVERTISEMENT

ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:33 IST
Last Updated 18 ಅಕ್ಟೋಬರ್ 2019, 19:33 IST
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ನಿರ್ದೇಶಕಿ ಶೈಲಜಾ ಛೆಬ್ಬಿ ಮಾತನಾಡಿದರು
ಆನೇಕಲ್‌ನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ನಿರ್ದೇಶಕಿ ಶೈಲಜಾ ಛೆಬ್ಬಿ ಮಾತನಾಡಿದರು   

ಆನೇಕಲ್:‘ಅಲಯನ್ಸ್‌ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಡಾ.ಅಯ್ಯಪ್ಪ ದೊರೆ ಅವರ ಕೊಲೆಗೆ ಕಾರಣವಾದ ಅಂಶಗಳನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕು. ನಿಜವಾದ ಅಪರಾಧಿಗಳನ್ನು ಗುರುತಿಸಬೇಕು. ಅಪರಾಧ ಕೃತ್ಯದ ಹಿಂದಿನ ಕಾರಣ ಹಾಗೂ ವ್ಯಕ್ತಿಗಳನ್ನು ಗುರುತಿಸುವಲ್ಲಿ ಪಾರದರ್ಶಕ ತನಿಖೆ ನಡೆಸುವ ಸಲುವಾಗಿ ಸಿಬಿಐಗೆ ಒಪ್ಪಿಸಬೇಕು’ ಎಂದು ವಿಶ್ವವಿದ್ಯಾಲಯದ ನಿರ್ದೇಶಕಿ ಶೈಲಜಾ ಛೆಬ್ಬಿ ತಿಳಿಸಿದರು.

ಅಲಯನ್ಸ್‌ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿಅವರು ಮಾತನಾಡಿದರು. ‘ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್‌ ಅಂಗೂರ್‌ ಘಟನೆ ಬಗ್ಗೆ ಸಲ್ಲದ ಮಾಹಿತಿಗಳನ್ನು ನೀಡುತ್ತಿದ್ದಾರೆ. ಈ ಘಟನೆಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸಲ್ಲದ ಮಾಹಿತಿ ತಿಳಿಸುತ್ತಿದ್ದಾರೆ. ಆದರೆ ನ್ಯಾಯಾಲಯದ ಆದೇಶದಲ್ಲಿ ಮಧುಕರ್‌ ಅಂಗೂರ್ ಮತ್ತು ಬಿ.ಎಸ್.ಪ್ರಿಯಾಂಕ ಅವರು ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸುವುದನ್ನು ಹಾಗೂ ಆಡಳಿತ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸೂಚಿಸಿದೆ’ ಎಂದರು.

‘ಡಾ.ಅಯ್ಯಪ್ಪ ದೊರೆ ಅವರ ಬಗ್ಗೆ ವಿಶ್ವವಿದ್ಯಾಲಯ ಅತ್ಯಂತ ಗೌರವಯುತವಾಗಿದೆ. ಅವರಿಂದ ವಿಶ್ವವಿದ್ಯಾಲಯಕ್ಕೆ ಯಾವುದೇ ತೊಂದರೆ ಇರಲಿಲ್ಲ. ಕೊಲೆಗೆ ಕಾರಣಗಳನ್ನು ಕಂಡುಹಿಡಿದು ನ್ಯಾಯ ಒದಗಿಸಬೇಕು. ತನಿಖೆಯ ದಿಕ್ಕನ್ನು ಬದಲಾಯಿಸಲು ಅವಕಾಶ ನೀಡಬಾರದು’ ಎಂದರು.

ADVERTISEMENT

‘ಕೊಲೆ ಆರೋಪಿ ಸೂರಜ್‌ ಸಿಂಗ್‌ 2015ರಲ್ಲಿ ಮಧುಕರ್‌ ಅಂಗೂರ್‌ ಜೊತೆಗಿದ್ದ 2017ರಲ್ಲಿ ನ್ಯಾಯಾಲಯದ ಆದೇಶದಂತೆ ಸುಧೀರ್‌ ಅಂಗೂರ್‌ ಆಡಳಿತದ ಚುಕ್ಕಾಣಿ ಹಿಡಿದಾಗ ಎಲ್ಲ ನೌಕರರಂತೆ ಸೂರಜ್‌ ಸಿಂಗ್‌ನನ್ನು ಮುಂದುವರಿಸಲಾಗಿತ್ತು. ಆತ ನೌಕರ ಎಂಬುದನ್ನು ಹೊರತುಪಡಿಸಿದರೆ ವಿಶ್ವವಿದ್ಯಾಲಯಕ್ಕೂ ಆರೋಪಿಗೂ ಸಂಬಂಧವಿಲ್ಲ. ನವೆಂಬರ್‌ 3ರಂದು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸಿದ್ಧತೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಘಟಿಕೋತ್ಸವ ನಡೆದಿರಲಿಲ್ಲ. ಸುಮಾರು 5,000 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವು ಮಂದಿ ಗಣ್ಯರನ್ನು ಆಹ್ವಾನಿಸಲಾಗಿತ್ತು. ವಿಶ್ವವಿದ್ಯಾಲಯದ ಹೆಸರಿಗೆ ಚ್ಯುತಿ ತರುವ ಸಲುವಾಗಿ ಹುನ್ನಾರ ನಡೆಸಲಾಗಿದೆ’ ಎಂದರು.

ರಿಜಿಸ್ಟ್ರಾರ್‌ ಮಧುಸೂದನ್‌ ಮಿಶ್ರಾ, ಉಪಕುಲಸಚಿವರಾದ ಸಂಜೀವ ಪಾದಶೆಟ್ಟಿ, ಕಿರಣ್‌ ಗೌತಮ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.