ADVERTISEMENT

ಪ್ರವಾಸದ ಹೆಸರಲ್ಲಿ ವಂಚನೆ: ಅಣ್ಣ–ತಂಗಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:46 IST
Last Updated 26 ಅಕ್ಟೋಬರ್ 2021, 19:46 IST
   

ಬೆಂಗಳೂರು: ರಿಯಾಯಿತಿ ದರದಲ್ಲಿ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಅಣ್ಣ–ತಂಗಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿ.ಪ್ರಶಾಂತ್‌ ಹಾಗೂ ಆತನ ಸಹೋದರಿ ಬಂಧಿತರು.

‘ಮುಖ್ಯ ಆರೋಪಿ ಪ್ರಶಾಂತ್‌ ತನ್ನ ತಾಯಿ ಹಾಗೂ ತಂಗಿಯ ಹೆಸರಿನಲ್ಲಿ ‘ರಾಯಲ್‌ ಡ್ರೀಮ್‌ ಟು ಫ್ಲೈ ಪ್ರೈವೇಟ್‌ ಲಿಮಿಟೆಡ್‌’ ಎಂಬ ಸಂಸ್ಥೆ ಸ್ಥಾಪಿಸಿದ್ದ.ಗಿರಿನಗರದಲ್ಲಿ ಅದರ ಕಚೇರಿ ಇತ್ತು. ವಿವಿಧೆಡೆ ಪ್ರವಾಸ ಕೈಗೊಳ್ಳಲು ಪ್ಯಾಕೇಜ್‌ಗಳನ್ನು ಪ್ರಕಟಿಸುತ್ತಿದ್ದ ಆತ, ಹಲವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದ. ಮತ್ತಷ್ಟು ಮಂದಿಯನ್ನು ಸದಸ್ಯರನ್ನಾಗಿ ಮಾಡಿದರೆ ಪ್ರವಾಸದ ಜೊತೆಗೆ ಶೇ 25 ಲಾಭಾಂಶ ನೀಡುವುದಾಗಿಯೂ ಆಮಿಷ ಒಡ್ಡುತ್ತಿದ್ದ. ಆತನ ಮಾತು ನಂಬಿ ಹಲವರು ಹಣ ಪಾವತಿಸುತ್ತಿದ್ದರು. ಆ ಮೊತ್ತದೊಂದಿಗೆ ಆತ ಪರಾರಿಯಾಗುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಜನರನ್ನು ನಂಬಿಸಿ ಮೋಸ ಮಾಡುವುದೇ ಆತನ ಕಾಯಕವಾಗಿತ್ತು. ಈ ಸಂಬಂಧ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಆ ವಿಚಾರ ಗೊತ್ತಾದ ಕೂಡಲೇ ಆರೋಪಿ ಗಿರಿನಗರಕ್ಕೆ ಸ್ಥಳ ಬದಲಿಸಿದ್ದ. ಅಲ್ಲಿ ಹೊಸ ಕಚೇರಿ ಆರಂಭಿಸಿದ್ದ. ಕೆಲ ದಿನಗಳ ನಂತರ ಆ ಕಚೇರಿಗೂ ಬೀಗ ಹಾಕಿ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಕಾಲೇಜೊಂದರ ಬಳಿ ಕಚೇರಿ ತೆರೆದಿದ್ದ. ಅಲ್ಲೂ ಸಾಕಷ್ಟು ಜನರಿಗೆ ಮೋಸ ಮಾಡಿದ್ದ. ಈ ಬಗ್ಗೆ ದೂರುಗಳು ಬಂದಿದ್ದವು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.