ADVERTISEMENT

ದುಬೈನಲ್ಲಿ ಕೆಲಸದ ಆಮಿಷ: 95 ಯುವತಿಯರ ಕಳ್ಳ ಸಾಗಣೆ

* ಸಿಸಿಬಿ ಪೊಲೀಸರ ಕಾರ್ಯಾಚರಣೆ * ಏಳು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:30 IST
Last Updated 7 ಏಪ್ರಿಲ್ 2022, 19:30 IST
   

ಬೆಂಗಳೂರು: ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯರನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಜಾಲದ ರೂವಾರಿ ಸೇರಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

'ಕೊಪ್ಪಳ ತಾಲ್ಲೂಕಿನ ಅಳವಾಡಿ ಕಂಪಲಿ ಗ್ರಾಮದ ಬಸವರಾಜು ಶಂಕರಪ್ಪ ಕಳಸದ (47), ಮೈಸೂರಿನ ನಜರಬಾದ್‌ನ ಆದರ್ಶ್ ಅಲಿಯಾಸ್ ಆದಿ (27), ಬೆಂಗಳೂರು ಜೆ.ಪಿ.ನಗರದ ಆರ್.ಚಂದು (20), ತಮಿಳುನಾಡಿನ ರಾಜೇಂದ್ರ ನಾಚಿಮುತ್ತು (37), ಮಾರಿಯಪ್ಪನ್ (44), ಟಿ. ಅಶೋಕ್ (29) ಹಾಗೂ ಎಸ್. ರಾಜೀವ್‌ಗಾಂಧಿ (35) ಬಂಧಿತರು. ಇವರಿಂದ ₹ 1.06 ಲಕ್ಷ ನಗದು, 7 ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಬಹುತೇಕ ಆರೋಪಿಗಳು, ಸಿನಿಮಾಗಳಲ್ಲಿ ನಟಿಸಲು ಅಗತ್ಯವಿರುವ ಕಲಾವಿದರನ್ನು ಪೂರೈಸುವ ಏಜೆಂಟರು. ನಟನೆ ಅವಕಾಶ ಕೇಳಿಕೊಂಡು ಬರುವ ಯುವತಿಯರನ್ನು ದುಬೈಗೆ ಕಳ್ಳ ಸಾಗಣೆ ಮಾಡುತ್ತಿದ್ದರು. ದುಡ್ಡಿನ ಆಮಿಷವೊಡ್ಡಿ ಡ್ಯಾನ್ಸ್‌ ಬಾರ್‌ಗಳಲ್ಲಿ ನೃತ್ಯಗಾರ್ತಿಯಾಗಿ ಕೆಲಸ ಮಾಡಿಸುತ್ತಿದ್ದರು. ಈ ಬಗ್ಗೆ ಯುವತಿಯೊಬ್ಬರು ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

ADVERTISEMENT

2020ರಲ್ಲಿ ಜೈಲು ಸೇರಿದ್ದ ಆರೋಪಿ: ‘ಜಾಲದ ಪ್ರಮುಖ ಆರೋಪಿ ಬಸವರಾಜು ಕಳಸದ, ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಯುವತಿಯರನ್ನು ಕಳ್ಳ ಸಾಗಣೆ ಮಾಡಿ, ಅದರಿಂದ ಕಮಿಷನ್ ಪಡೆಯುತ್ತಿದ್ದ. ಆತನ ವಿರುದ್ಧ 2020ರಲ್ಲೇ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು. ‘ಜೈಲಿಗೆ ಹೋಗಿದ್ದ ಆರೋಪಿ, ಜಾಮೀನು ಮೇಲೆ ಹೊರಬಂದಿದ್ದ. ಪುನಃ ತಂಡ ಕಟ್ಟಿಕೊಂಡು ಕೃತ್ಯ ಮುಂದುವರಿಸಿದ್ದ’ ಎಂದರು.

17 ಮಹಿಳೆಯರ ರಕ್ಷಣೆ: ‘ಆರೋಪಿಗಳು ಇದುವರೆಗೂ 95 ಯುವತಿಯರನ್ನು ಭಾರತದಿಂದ ದುಬೈಗೆ ಕಳ್ಳ ಸಾಗಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಕೆಲವರು ವಾಪಸು ಬಂದಿದ್ದಾರೆ. ಬಹುತೇಕರು ದುಬೈನಲ್ಲಿರುವ ಮಾಹಿತಿ ಇದೆ. ಸದ್ಯ 17 ಯುವತಿಯರನ್ನು ರಕ್ಷಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ದುಬೈನಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು’ ಎಂಬುದಾಗಿ ಆರೋಪಿಗಳು ಯುವತಿಯರಿಗೆ ಹೇಳುತ್ತಿದ್ದರು. ದುಬೈಗೆ ಹೋಗಲು ಒಪ್ಪುತ್ತಿದ್ದವರಿಗೆ ₹ 50 ಸಾವಿರದಿಂದ ₹ 1 ಲಕ್ಷದವರೆಗೂ ಹಣ ನೀಡುತ್ತಿದ್ದರು. ಪಾಸ್‌ಪೋರ್ಟ್ ಮತ್ತು ವೀಸಾ ಸಹ ಮಾಡಿಸಿಕೊಡುತ್ತಿದ್ದರು’ ಎಂದೂ ತಿಳಿಸಿದರು.

‘ದುಬೈಗೆ ಹೋದ ನಂತರ, ಯುವತಿಯರು ತೊಂದರೆ ಅನುಭವಿಸುತ್ತಿದ್ದರು. ಡ್ಯಾನ್ಸ್ ಬಾರ್‌ನಲ್ಲಿ ನೃತ್ಯ, ಗ್ರಾಹಕರ ಜೊತೆ ಖಾಸಗಿ ಕ್ಷಣಗಳನ್ನು ಕಳೆಯುವಂತೆ ಮಾಲೀಕರು ಪೀಡಿಸುತ್ತಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.