ADVERTISEMENT

ಬೆಂಗಳೂರು | ಮತ್ತೊಂದು ಹತ್ಯೆಗೆ ಸಂಚು: ರೌಡಿ ‘ಬೇಕರಿ’ಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 14:37 IST
Last Updated 20 ಆಗಸ್ಟ್ 2023, 14:37 IST
ಸಿಸಿಬಿ ಕಚೇರಿ
ಸಿಸಿಬಿ ಕಚೇರಿ   

ಬೆಂಗಳೂರು: ಜೈಲಿನಿಂದ ಹೊರಬರುತ್ತಿದ್ದಂತೆ ರೌಡಿ ಮಹೇಶ್‌ನನ್ನು ಹತ್ಯೆ ಮಾಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು, ಹಲವು ರೌಡಿಗಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ.

ಸಿದ್ದಾಪುರ ಠಾಣೆಯ ರೌಡಿ ಪಟ್ಟಿಯಲ್ಲಿ ಹೆಸರಿದ್ದ ಮಹೇಶ್‌ನನ್ನು ಆಗಸ್ಟ್‌ 4ರಂದು ಹತ್ಯೆ ಮಾಡಲಾಗಿತ್ತು. ರೌಡಿ ವಿಲ್ಸನ್ ಗಾರ್ಡನ್ ನಾಗ, ಮೀಟರ್ ಮೋಹನ್ ಹಾಗೂ ಇತರರು ಕೃತ್ಯ ಎಸಗಿದ್ದರೆಂಬುದು ತನಿಖೆಯಿಂದ ಗೊತ್ತಾಗಿತ್ತು. ಇಬ್ಬರೂ ಪ್ರಮುಖ ಆರೋಪಿಗಳು ಈಗಾಗಲೇ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಇದರ ಬೆನ್ನಲ್ಲೇ ರೌಡಿ ಬೇಕರಿ ರಘುನನ್ನು ಹತ್ಯೆ ಮಾಡಲು ತಂಡವೊಂದು ಸಂಚು ರೂಪಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಸಿಸಿಬಿ ಪೊಲೀಸರು, ಬೇಕರಿ ರಘುನನ್ನು ಇತ್ತೀಚೆಗೆ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ರೌಡಿ ಸೈಕಲ್ ರವಿ ಸಹಚರನಾಗಿರುವ ರಘು ವಿರುದ್ಧ 20 ಪ್ರಕರಣಗಳು ದಾಖಲಾಗಿವೆ. ಹನುಮಂತನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಜೊತೆಗೆ, ಈತ ಹಲವು ದಿನಗಳಿಂದ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾನೆ. ಈತನನ್ನು ಕೊಲೆ ಮಾಡಲು ಎದುರಾಳಿ ತಂಡದವರು ಸಂಚು ರೂಪಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ರಘುನನ್ನು ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ನಗರದ ಹಲವು ರೌಡಿಗಳ ನಡುವೆ ವೈಷಮ್ಯವಿದೆ. ಅದೇ ಕಾರಣಕ್ಕೆ, ಪರಸ್ಪರ ಹಲ್ಲೆ ಹಾಗೂ ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇಂಥ ರೌಡಿಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.