ಬೆಂಗಳೂರು: ಯೇಸುಕ್ತಿಸ್ತರನ್ನು ಶಿಲುಬೆಗೆ ಏರಿಸಿದ ದಿನ ‘ಶುಭ ಶುಕ್ರವಾರ’ವನ್ನು ನಗರದಲ್ಲಿ ಕ್ರೈಸ್ತ ಸಮುದಾಯದವರು ಭಕ್ತಿ ಭಾವದಿಂದ ಆಚರಿಸಿದರು. ಶಿಲುಬೆಗೆ ಏರಿದ್ದನ್ನು ಸ್ಮರಿಸಿ ಕಣ್ಣೀರಾದರು.
ನಗರದ ಬೆಸಿಲಿಕಾ ಚರ್ಚ್, ಜಾನ್ಸ್ ಚರ್ಚ್, ಜೋಸೆಫ್ ಚರ್ಚ್, ಪ್ಯಾಟ್ರಿಕ್ಸ್ ಚರ್ಚ್, ತೆರೇಸಮ್ಮ ಚರ್ಚ್, ಇನ್‌ಫೆಂಟ್ ಜೀಸಸ್ ಚರ್ಚ್, ಅಸೆಂಬ್ಲಿ ಆಫ್ ಗಾಡ್ ಚರ್ಚ್, ಪೆಂಟೆಕೋಸ್ಟಲ್ ಚರ್ಚ್, ಪ್ರೆಸ್ಬಿಟೇರಿಯನ್ ಚರ್ಚ್, ಚರ್ಚ್ ಆಫ್ ಕ್ರೈಸ್ಟ್, ಝಿಯೋನ್ ಚರ್ಚ್, ನ್ಯೂಲೈಫ್ ಚರ್ಚ್, ಫುಲ್ ಗಾಸ್ಪೆಲ್ ಚರ್ಚ್, ಮಾರ್ ತೋಮಾ ಚರ್ಚ್, ರಿವೈವಲ್ ಚರ್ಚ್, ಬ್ಯಾಪ್ಟಿಸ್ಟ್ ಚರ್ಚ್, ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್, ಜಾಕೊಬೈಟ್ ಸಿರಿಯನ್ ಕ್ಯಾಥೋಲಿಕ್ ಚರ್ಚ್ ಸೇರಿದಂತೆ ವಿವಿಧ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು.
ಏಸು ಕ್ರಿಸ್ತರು ಸಿಲುಬೆಗೆ ಏರಿದ ಅವಧಿಯಲ್ಲಿ ಎದುರಿಸಿದ ಕಷ್ಟ, ಶೋಷಣೆಗಳನ್ನು ಸ್ಮರಿಸುವ ಶಿಲುಬೆಯ ಮಾರ್ಗ, ಅಧ್ಯಾತ್ಮ ಪೂಜಾ ವಿಧಿಯನ್ನು ನಡೆಸಿ, ವಿಶೇಷವಾಗಿ ಪ್ರಾರ್ಥಿಸಲಾಯಿತು.
ಯೇಸು ದೇವರು ಸಿಲುಬೆಯ ಮೇಲೆ ನುಡಿದ ಸಪ್ತ ಸಂದೇಶಗಳನ್ನು ವಿವಿಧ ಚರ್ಚ್‌ಗಳಲ್ಲಿ ಓದಲಾಯಿತು. ಶಿಲುಬೆಯ ಹಾದಿಯ ವಾಚನ ನಡೆಯಿತು. ಶಿಲುಬೆಗೆ ಏರಿದ್ದನ್ನು ರೂಪಕಗಳ ಮೂಲಕ ಪ್ರದರ್ಶಿಸಲಾಯಿತು. ಮಾನವರಿಗಾಗಿ ದೇವಪುತ್ರ ಮಾಡಿದ ತ್ಯಾಗವನ್ನು ಕಂಡು ಭಕ್ತರು ಮಮ್ಮಲ ಮರುಗಿದರು. ಏಸು ದೇವರ ಪಾಡು, ಮರಣದ ಬಗ್ಗೆ ಬೈಬಲ್ ಗ್ರಂಥ ವಾಚನ ಮಾಡಿದರು.
ಹಲವು ಚರ್ಚ್‌ಗಳಲ್ಲಿ ಪಾದಪೂಜೆಗಳನ್ನು ನೆರವೇರಿಸುವ ಮೂಲಕ ದೀನರ ಸೇವೆಯ ಪ್ರಾಮುಖ್ಯವನ್ನು ಸಾರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.