ADVERTISEMENT

ಬೆಂಗಳೂರು | ಕಾರಾಗೃಹದ ಮೇಲೆ CCB ದಾಳಿ; ಚಾಕು, ಕತ್ತರಿ, ಗಾಂಜಾ, ಸಿಗರೇಟು ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:53 IST
Last Updated 17 ಜೂನ್ 2025, 15:53 IST
   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಢೀರ್‌ ದಾಳಿ ನಡೆಸಿ ಪರಿಶೀಲಿಸಿದ್ದು, ಗಾಂಜಾ, ಬೀಡಿ, ಸಿಗರೇಟು ಸೇರಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಜೈಲಿನೊಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಸಿಸಿಬಿ ದಾಳಿಯಿಂದ ಬಹಿರಂಗವಾಗಿದೆ.

ವಿವಿಧ ಬ್ಯಾರಕ್‌ಗಳಲ್ಲಿ ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್‌ ಗೋಲ್ಡ್‌, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮರ್‌, ಕತ್ತರಿ, ಮೊಬೈಲ್‌ ಚಾರ್ಜರ್‌, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಪ್ಲೇ ಕಾರ್ಡ್‌ನ ಆಟದ ಬಳಿಕ ಸಂಖ್ಯೆ ಬರೆದುಕೊಳ್ಳಲು ಕೈದಿಗಳು ಉಪಯೋಗಿಸಿದ್ದ ಪುಸ್ತಕ, ಬಿಸಿ ನೀರು ಕಾಯಿಸುವ ಕಾಯಲ್‌, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆಯಾಗಿವೆ. ಇಬ್ಬರು ಕೈದಿಗಳ ಬಳಿಯಿದ್ದ ₹16 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಜೈಲಿನ ವಿವಿಧ ಬ್ಯಾರಕ್‌ಗಳಿಗೆ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಪೂರೈಸುತ್ತಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಿಗ್ಗೆ ದಿಢೀರ್‌ ದಾಳಿ ನಡೆಸಿದ ಸಿಸಿಬಿ ತಂಡಕ್ಕೆ ಹಲವು ನಿಷೇಧಿತ ವಸ್ತುಗಳು ಸಿಕ್ಕಿವೆ. ಬ್ಯಾರಕ್‌ಗಳಲ್ಲಿ ಅಪಾರ ಪ್ರಮಾಣದ ಸಿಗರೇಟು ಪ್ಯಾಕ್‌ಗಳು, ಬೀಡಿ ಪೊಟ್ಟಣಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಕದ್ದುಮುಚ್ಚಿ ಮೊಬೈಲ್‌ ಪೂರೈಕೆ: 'ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್‌ ಪೂರೈಸುತ್ತಿದ್ದ ಕಾರಾಗೃಹ ಆಸ್ಪತ್ರೆಯ ಇಬ್ಬರು ಆಪ್ತ ಸಮಾಲೋಚಕರನ್ನು ಕಳೆದ ವಾರ ಬಂಧಿಸಲಾಗಿತ್ತು. ಹೊರ ಗುತ್ತಿಗೆ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದ ನವ್ಯಶ್ರೀ (33) ಮತ್ತು ಸೃಜನ್‌ (33) ಅವರು, ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಕೈದಿಗಳಿಗೆ ಮೊಬೈಲ್‌ ಪೂರೈಸುತ್ತಿದ್ದರು. ನವ್ಯಶ್ರೀ ಅವರು ತಮ್ಮ ಬ್ಯಾಗ್‌ನಲ್ಲಿ ಮೊಬೈಲ್‌ ಬಚ್ಚಿಟ್ಟುಕೊಂಡು ಜೈಲಿನ ಒಳಕ್ಕೆ ಹೋಗಲು ಯತ್ನಿಸಿದ್ದರು. ಆಗ ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಮೊಬೈಲ್‌ ಪತ್ತೆ ಆಗಿತ್ತು. ಬಂಧಿತರನ್ನು ವಿಚಾರಣೆ ನಡೆಸಿದಾಗ ಜೈಲಿನ ಒಳಗೆ ಕೆಲವು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಗೊತ್ತಾಗಿತ್ತು. ಆ ಮಾಹಿತಿ ಆಧರಿಸಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಸೋಮವಾರ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ತಪಾಸಣೆ ನಡೆಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ನಿಷೇಧಿತ ವಸ್ತುಗಳನ್ನು ಯಾರು ಪೂರೈಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಸೀಮಂತ್‌ ಕುಮಾರ್ ಸಿಂಗ್ ತಿಳಿಸಿದರು.

ಹಿಂದೆಯೂ ದಾಳಿ ನಡೆದಿತ್ತು...:

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಅವರಿಗೆ ವಿಶೇಷ ಆತಿಥ್ಯ ಕಲ್ಪಿಸಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ವಿಶೇಷ ಆತಿಥ್ಯ ಪ್ರಕರಣದ ಬಳಿಕ (2024ರ ಸೆಪ್ಟೆಂಬರ್‌ 9) ಸಿಸಿಬಿ ದಾಳಿ ನಡೆಸಿತ್ತು. ಆಗಲೂ ಮೊಬೈಲ್‌, ಪೆನ್‌ಡ್ರೈವ್‌, ಚಾಕು ಪತ್ತೆ ಆಗಿದ್ದವು. ಕಳೆದ ಮೇ 25ರಂದು ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗದ ಪೊಲೀಸರು ದಾಳಿ ನಡೆಸಿದಾಗ ನಗದು, ಚಾಕು, ಮೊಬೈಲ್‌ ಹಾಗೂ ಎಲೆಕ್ಟ್ರಿಕ್‌ ಸ್ಟೌ ಪತ್ತೆ ಆಗಿದ್ದವು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.