ADVERTISEMENT

ಯಲಹಂಕ: ಮಹಿಳೆಯ ಚಿನ್ನದ ಸರ ಕಸಿದು ಪರಾರಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 21:50 IST
Last Updated 19 ಫೆಬ್ರುವರಿ 2021, 21:50 IST
.
.   

ಯಲಹಂಕ: ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಮಹಿಳೆಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಆಕೆಯ ಗುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಜಕ್ಕೂರು ಗ್ರಾಮದಲ್ಲಿ ಗುರುವಾರ ನಡೆದಿದೆ.

ರೇಖಾ ಎಂಬ ಮಹಿಳೆಯು, ಜಕ್ಕೂರು ವೃತ್ತದಿಂದ ತರಕಾರಿ ತೆಗೆದುಕೊಂಡು ರಾತ್ರಿ ಸುಮಾರು 8.30ರ ಹೊತ್ತಿನಲ್ಲಿ ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಪ್ಪುಬಣ್ಣದ ನೋಂದಣಿ ಸಂಖ್ಯೆಯಿಲ್ಲದ ಡಿಯೋ ಹೋಂಡಾ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ಈಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದ ಎದುರಿನ 8ನೇ ಸಿ ಕ್ರಾಸ್‌ನಲ್ಲಿ ಎದುರಿಗೆ ಬಂದ ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಆಕೆಯನ್ನು ತಡೆದು, ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಪ್ರತಿರೋಧ ಒಡ್ಡಿದಾಗ ತಳ್ಳಿದ್ದಾರೆ. ಆಕೆಯು ಕೆಳಗೆ ಬಿದ್ದಾಗ ಕುತ್ತಿಗೆಯಲ್ಲಿದ್ದ ಸುಮಾರು 48 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ಫೋನ್ ಮತ್ತು ಪರ್ಸ್‌ ಕಸಿದುಕೊಂಡು ಪರಾರಿಯಾಗಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಇದೇ ಗ್ರಾಮದ ಮತ್ತೊಂದು ಮನೆಯ ಬಳಿ ಬಂದಿದ್ದ ಈ ದುಷ್ಕರ್ಮಿಗಳು, ವಿಳಾಸಕೇಳುವ ನೆಪದಲ್ಲಿ ಮಹಿಳೆಯೊಬ್ಬರನ್ನು ಮಾತನಾಡಿಸಿ, ಕುಡಿಯಲು ನೀರು ಕೇಳಿದ್ದಾರೆ. ಆಕೆಯು ಕಾಂಪೌಂಡ್ ಒಳಗಿನಿಂದಲೇ ನೀರು ಕೊಟ್ಟಿದ್ದಾರೆ. ನಂತರ ದೂರದಲ್ಲಿ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಗಮನಿಸುತ್ತಿದ್ದುದು ಇವರ ಅರಿವಿಗೆ ಬಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಈ ಕೃತ್ಯ ಎಸಗಿದ್ದು, ಅವರ ಎಲ್ಲ ಚಲನವಲನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.