ADVERTISEMENT

ಬೆಂಗಳೂರಲ್ಲಿ ಇಬ್ಬರು ಸರಗಳ್ಳರ ಬಂಧನ.. ಜೈಲಿನಿಂದ ಹೊರಬಂದರೂ ಕೃತ್ಯ

ಮಹಿಳೆಯ ಮೇಲೆ ಹಲ್ಲೆ: ಜೈಲಿನಿಂದ ಹೊರಬಂದು ಕೃತ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 15:50 IST
Last Updated 17 ಅಕ್ಟೋಬರ್ 2025, 15:50 IST
ಯೋಗಾನಂದ, ಪ್ರವೀಣ್
ಯೋಗಾನಂದ, ಪ್ರವೀಣ್   

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೊಲ್ಲರಹಳ್ಳಿ ನಿವಾಸಿ ಯೋಗಾನಂದ ಹಾಗೂ ಈತನ ಸಹಚರ ಪ್ರವೀಣ್ ಎಂಬುವರನ್ನು ಬಂಧಿಸಿ, 80 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಸೆಪ್ಟೆಂಬರ್ 13ರಂದು ದೂರುದಾರ ಮಹಿಳೆ ಉಷಾ ಹಾಗೂ ಸ್ನೇಹಿತೆ ವರಲಕ್ಷ್ಮಿ ಅವರು ಗಣೇಶ ಹಬ್ಬದ ನಿಮಿತ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ ಆಗುವಾಗ ಬೈಕ್​ನಲ್ಲಿ ಬಂದ ಆರೋಪಿಗಳು ಮಚ್ಚು ತೋರಿಸಿದ್ಧಾರೆ. ಗಾಬರಿಗೊಂಡ ಉಷಾ ಸರ ನೀಡಿದರು. ಪ್ರತಿರೋಧ ತೋರಿಸಿದ ವರಲಕ್ಷ್ಮಿಗೆ ಮಚ್ಚಿನಿಂದ ಹಲ್ಲೆ ನಡೆಸಿದಾಗ, ಕೈ ಬೆರಳು ತುಂಡಾಗಿತ್ತು.

ADVERTISEMENT

ಅದೇ ದಿನ ಕುಮಾರಸ್ವಾಮಿ ಲೇಔಟ್ ಹಾಗೂ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಗರದ ಗೊಲ್ಲರಹಳ್ಳಿಯಲ್ಲಿ ವಾಸವಾಗಿದ್ದ ಪ್ರಮುಖ ಆರೋಪಿ ಯೋಗಾನಂದ ಮೂಲತಃ ಮದ್ದೂರಿನ ಮಾರಸಿಂಗಹಳ್ಳಿ ನಿವಾಸಿ. 2010 ರಿಂದ ಕೊಲೆ, ದರೋಡೆ ಹಾಗೂ ಸರಗಳ್ಳತನ ಸೇರಿ 25 ಪ್ರಕರಣಗಳಲ್ಲಿ ಭಾಗಿಯಾಗಿ, ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರು. ಪ್ರಕರಣವೊಂದರಲ್ಲಿ ಬಂಧಿತನಾಗಿ ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದು ಮತ್ತೆ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು. ಸೆಪ್ಟೆಂಬರ್ 13ರಂದು ಕೃತ್ಯವೆಸಗಿದ ಬಳಿಕ ಗೋವಾ, ಪುದುಚೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಓಡಾಡಿ ಹಣ ಖಾಲಿಯಾದ ಬಳಿಕ ಊರಿಗೆ ವಾಪಸ್ ಆಗಿದ್ದರು. ಆರೋಪಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್, ‘ಮಹಿಳೆಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಸರಗಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.