ADVERTISEMENT

ಕುಲಪತಿಗಳ ಬಾಯಿಗೂ ಬೀಗ! ರಾಜ್ಯ ಸರ್ಕಾರದಿಂದ ಮತ್ತೊಂದು ಹೆಜ್ಜೆ

ಜೆಡಿಎಸ್‌ ಶಾಸಕರಿಗೆ ಲಗಾಮು ಹಾಕಿದ ಬಳಿಕ ಆದೇಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:59 IST
Last Updated 19 ಜೂನ್ 2019, 19:59 IST
   

ಬೆಂಗಳೂರು: ಜೆಡಿಎಸ್‌ ಶಾಸಕರ ಬಾಯಿಗೆ ಬೀಗ ಹಾಕಿರುವ ರಾಜ್ಯ ಸರ್ಕಾರ ಇದೀಗ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಬಾಯಿ ಮುಚ್ಚಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ.

‘ಸರ್ಕಾರಿ ವಿಶ್ವವಿದ್ಯಾಲಯಗಳ ಎಲ್ಲ ಹಾಲಿ ಕುಲಪತಿಗಳು ವಿಶ್ವವಿದ್ಯಾಲಯ ಕುರಿತಂತೆಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು’ ಎಂದುಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯ ಪ್ರತಿ ‘ಪ್ರಜಾವಾಣಿ’ಗೆ ದೊರೆತಿದೆ.

‘ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಮತ್ತು ಇತರ ಅಧಿಕಾರಿಗಳು ವಿಶ್ವವಿದ್ಯಾಲಯಗಳ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳಿಕೆ ನೀಡುವುದು ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದಂತೆ. ಹೀಗಾಗಿ ಇನ್ನು ಮುಂದೆ ಇಂತಹ ಪ್ರಸಂಗಗಳು ನಡೆದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ವಿಶ್ವವಿದ್ಯಾಲಯಗಳು ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತಂದು, ಚರ್ಚಿಸಿ ಪರಿಹಾರಕ್ಕೆ ಯತ್ನಿಸಬೇಕು ಎಂದು ಸಹ ತಿಳಿಸಲಾಗಿದೆ. ಸರ್ಕಾರದ ಈ ಸುತ್ತೋಲೆಯಿಂದ ಹಲವು ಕುಲಪತಿಗಳು ಕೆಂಡಾಮಂಡಲರಾಗಿದ್ದಾರೆ. ‘ಹಣಕಾಸು ಅಥವಾ ಆಡಳಿತಾತ್ಮಕ ವಿಚಾರಗಳಲ್ಲಿ ಅವ್ಯವಹಾರಗಳು ನಡೆದರೆ ಸರ್ಕಾರ ಮಧ್ಯಪ್ರವೇಶಿಸಬಹುದು. ಆದರೆ ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರ ಕುಲಪತಿಗಳನ್ನು ನೇರವಾಗಿ ನಿಯಂತ್ರಿಸಲು ಹೊರಟಿದೆ’ ಎಂದು ಸರ್ಕಾರಿ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ತಿಳಿಸಿದರು.

‘ನಮಗೆ ವಾಕ್‌ ಸ್ವಾತಂತ್ರ್ಯ ಇಲ್ಲವೇ? ಸರ್ಕಾರ ಇಂತಹ ಸುತ್ತೋಲೆಯನ್ನು ಹೊರಡಿಸಲು ಹೇಗ ಸಾಧ್ಯ?’ ಎಂದು ಇನ್ನೊಬ್ಬ ಕುಲಪತಿ ಪ್ರಶ್ನಿಸಿದ್ದಾರೆ.

‘ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಕುಲಪತಿಗಳು ಇದರ ಮುಖ್ಯಸ್ಥರು. ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳು ಮತ್ತು ಸಾರ್ವಜನಿಕರಿಗೆ ತಿಳಿಸಲು ಅವರು ಸ್ವತಂತ್ರರು. ಸರ್ಕಾರ ಈ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲೇಬೇಕು’ ಎಂದು ಮತ್ತೊಬ್ಬ ಕುಲಪತಿ ಆಗ್ರಹಿಸಿದರು.

ಸರ್ಕಾರದ ಕ್ರಮಕ್ಕೆ ವಿಶ್ರಾಂತ ಕುಲಪತಿಗಳು ಮತ್ತು ಶಿಕ್ಷಣ ತಜ್ಞರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುತ್ತೋಲೆ 2000ನೇ ಇಸವಿಯ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಯ ಆಶಯಕ್ಕೆ ವಿರುದ್ಧವಾದುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.