ADVERTISEMENT

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ: ಬಿ. ರಮೇಶ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:23 IST
Last Updated 7 ಜನವರಿ 2026, 20:23 IST
ಸಮಾವೇಶದಲ್ಲಿ ಬಿ. ರಮೇಶ್, ಟಿ.ಆರ್. ಪರಶುರಾಮನ್, ರಮೇಶ್ ಬಿ. ಕುಡೇನಟ್ಟಿ, ಜೈಪ್ರಕಾಶ್, ರಾಜಲಕ್ಷ್ಮಿ ಶ್ರೀನಿವಾಸನ್, ನಿರ್ಮಲ ಎಂ., ಎಂ.ವಿ. ವಿಜಯಲಕ್ಷ್ಮಿ, ತ್ರಿಪುರ ಜಗ್ಗಯ್ಯ, ರಿತಿಕಾ ಸಿನ್ಹಾ ಉಪಸ್ಥಿತರಿದ್ದರು
ಸಮಾವೇಶದಲ್ಲಿ ಬಿ. ರಮೇಶ್, ಟಿ.ಆರ್. ಪರಶುರಾಮನ್, ರಮೇಶ್ ಬಿ. ಕುಡೇನಟ್ಟಿ, ಜೈಪ್ರಕಾಶ್, ರಾಜಲಕ್ಷ್ಮಿ ಶ್ರೀನಿವಾಸನ್, ನಿರ್ಮಲ ಎಂ., ಎಂ.ವಿ. ವಿಜಯಲಕ್ಷ್ಮಿ, ತ್ರಿಪುರ ಜಗ್ಗಯ್ಯ, ರಿತಿಕಾ ಸಿನ್ಹಾ ಉಪಸ್ಥಿತರಿದ್ದರು   

ಬೆಂಗಳೂರು: ‘ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಯ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಬೇಕಾ ಗತ್ಯವಿದೆ’ ಎಂದು ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ. ರಮೇಶ್ ಅಭಿಪ್ರಾಯಪಟ್ಟರು. 

ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ (ಐಐಬಿಎಸ್) ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನೆಕ್ಸಸ್ ಎಡ್ಜ್ 2026’ ಉದ್ಯಮ ಆಡಳಿತ ನಿರ್ವಹಣೆ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಉದ್ಯಮ ವಲಯದ ಹೊಸ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಸೂಕ್ತ ಪರಿಷ್ಕರಣೆ ಮಾಡುವ ಪ್ರಕ್ರಿಯೆಯನ್ನು ವಿಶ್ವವಿದ್ಯಾಲಯ ಈಗಾಗಲೇ ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ಉದ್ಯೋಗ ಕೌಶಲ ಅಭಿವೃದ್ಧಿ ಮತ್ತು ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಉದ್ಯಮ ಸಂಸ್ಥೆಗಳ ಸಹಭಾಗಿತ್ವದ ಮೂಲಕ ನೇರ ನೇಮಕಾತಿ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

ADVERTISEMENT

‘ಕೇವಲ ಪದವಿ ಪಡೆಯಲು ಸೀಮಿತವಾಗದೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಕೌಶಲ ಹಾಗೂ ಉದ್ಯಮಶೀಲತೆಯನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಟಿ.ಆರ್.ಪರುಶರಾಮನ್, ‘ಮುಂದಿನ ದಶಕವು ತಂತ್ರಜ್ಞಾನ ಪಾರಮ್ಯದ ಆಳ್ವಿಕೆಯ ಕಾಲವಾಗಲಿದೆ. ಭಾರತದ ಆರ್ಥಿಕತೆಯು ಸೇವಾ ವಲಯದ ಆದ್ಯತೆಯ ಕಡೆಯಿಂದ ಉತ್ಪನ್ನ ತಯಾರಿಕಾ ಕ್ಷೇತ್ರದತ್ತ ಹೊರಳುತ್ತಿದೆ. ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ ಸುವರ್ಣ ಕಾಲ ಪ್ರಾರಂಭವಾಗುವ ಸಾಧ್ಯತೆ ದಟ್ಟವಾಗಿದೆ’ ಎಂದು ವಿಶ್ಲೇಷಿಸಿದರು.

ಐಐಬಿಎಸ್ ಅಧ್ಯಕ್ಷ ಜೈಪ್ರಕಾಶ್, ಜೋಹೊ ಸಂಸ್ಥೆಯ ನಿರ್ದೇಶಕಿ ರಾಜಲಕ್ಷ್ಮಿ ಶ್ರೀನಿವಾಸನ್, ಬಿಸಿಯುಎಸ್ಎಂಎಸ್ ನಿರ್ದೇಶಕಿ ನಿರ್ಮಲ ಎಂ., ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರಮೇಶ್ ಬಿ. ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಐಐಬಿಎಸ್ ಪ್ರಾಂಶುಪಾಲ ತ್ರಿಪುರ ಜಗ್ಗಯ್ಯ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.