ಬೆಂಗಳೂರು: ಸಾರ್ವಜನಿಕರಿಗೆ ವಂಚಿಸಿದ ಆರೋಪದ ಮೇಲೆ ಬಂಧಿತರಾಗಿರುವ ರೇಖಾ ದಂಪತಿ ಎರಡು ವರ್ಷದಲ್ಲಿ ₹24 ಕೋಟಿ ಮೊತ್ತದ ವಹಿವಾಟು ನಡೆಸಿರುವುದು ಸಿಸಿಬಿ ಆರ್ಥಿಕ ಅಪರಾಧ ದಳದ ತನಿಖೆ ವೇಳೆ ಗೊತ್ತಾಗಿದೆ.
ಎಚ್‌ಡಿಎಫ್‌ಸಿ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದು, ಇದರಲ್ಲಿ 2002ರಿಂದ 2024ರ ಅವಧಿಯಲ್ಲಿ ₹24 ಕೋಟಿ ವ್ಯವಹಾರ ನಡೆಸಿದ್ದಾರೆ. ಅಲ್ಲದೇ ಕರ್ನಾಟಕ ಬ್ಯಾಂಕ್ ಹಾಗೂ ಎಸ್‌ಬಿಐನಲ್ಲೂ ಖಾತೆ ಹೊಂದಿದ್ದು, ಹಣದ ವಹಿವಾಟುಗಳ ಕುರಿತು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿ ನಿಸಾರ್ ಅಹ್ಮದ್ ಅವರಿಗೆ ₹6 ಕೋಟಿ ವಂಚಿಸಿದ ಆರೋಪದಡಿ ರೇಖಾ (38), ಆಕೆಯ ಪತಿ ಮಂಜುನಾಥಾಚಾರಿ (40) ಮತ್ತು ಸ್ನೇಹಿತ ಚೇತನ್ (35) ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು.
‘ಮೂವರೂ ಸೇರಿ ಉದ್ಯಮಿಗೆ ವಂಚಿಸಿರುವುದಾಗಿ ವಿಚಾರಣೆ ವೇಳೆ ರೇಖಾ ತಿಳಿಸಿದ್ದಾಳೆ. ಸಾಲ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡಿರುವುದಲ್ಲದೇ, ‘ಶೇರ್‌ಚಾಟ್’ ಆ್ಯಪ್‌ನಲ್ಲಿ ವ್ಯಕ್ತಿಯೊಬ್ಬರಿಗೆ ವಿಡಿಯೊ ಕರೆ ಮಾಡಿ, ₹31 ಲಕ್ಷ ಪಡೆದು ವಂಚಿಸಿದ್ದಾಳೆ. ಅಲ್ಲದೇ ಈಕೆ ವಿರುದ್ಧ ಹಲವು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.