ಪ್ರಜಾವಾಣಿ ವಾರ್ತೆ
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಕೋರ್ಟ್ ಸೂಚನೆ ಮೇರೆಗೆ ಚಲನಚಿತ್ರ ನಿರ್ಮಾಪಕ ಎನ್.ಎಂ.ಕುಮಾರ್ ಅವರನ್ನು ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಕೋರ್ಟ್ ಆದೇಶದಂತೆ ಕಾರ್ಯಾಚರಣೆ ನಡೆಸಿ ಬುಧವಾರ ರಾತ್ರಿ ಹಾಸನದಲ್ಲಿ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ನಟರೊಬ್ಬರಿಂದ ಸಾಲ ಪಡೆದುಕೊಂಡಿದ್ದ ಕುಮಾರ್ ಅವರು ಹಣವನ್ನು ವಾಪಸ್ ನೀಡಿರಲಿಲ್ಲ. ಕುಮಾರ್ ಅವರು ನೀಡಿದ್ದ ಚೆಕ್ ಸಹ ಬೌನ್ಸ್ ಆಗಿತ್ತು. ಕುಮಾರ್ ಅವರ ವಿರುದ್ಧ 4ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಕುಮಾರ್‌ಗೆ ಶಿಕ್ಷೆ ವಿಧಿಸಿ ಬಂಧನದ ವಾರಂಟ್ ಹೊರಡಿಸಿತ್ತು. ಕುಮಾರ್ ಅವರನ್ನು ಬಂಧಿಸುವಂತೆಯೂ ಉಪ್ಪಾರಪೇಟೆ ಠಾಣೆಯ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಕೋರ್ಟ್ ಸೂಚನೆ ಬೆನ್ನಲ್ಲೇ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
‘ರನ್ನ’, ‘ಮಾಣಿಕ್ಯ’, ‘ಮುಕುಂದ ಮುರಾರಿ’, ‘ಅಂಜನಿಪುತ್ರ’ ಸೇರಿದಂತೆ ಹಲವು ಸಿನಿಮಾಗಳನ್ನು ಎಂ.ಎನ್.ಕುಮಾರ್ ಅವರು ನಿರ್ಮಾಣ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.