ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್, ಗೋಸಾಯಿ ಸಂಸ್ಥಾನದ ಮಂಜುನಾಥ ಭಾರತಿ ಸ್ವಾಮೀಜಿ, ಸಚಿವ ಶಿವರಾಜ ಎಸ್. ತಂಗಡಗಿ. ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ ಅವರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಛತ್ರಪತಿ ಶಿವಾಜಿ ಮಹಾರಾಜರು ತನ್ನ ರಾಜ್ಯದಲ್ಲಿ ಎಲ್ಲ ಸಮುದಾಯಗಳಿಗೆ ಕೊಡುಗೆ ನೀಡಿದವರು. ಕೇಸರೀಕರಣಗೊಳಿಸಿ ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ತನ್ನದೇ ಆದ ಇತಿಹಾಸವನ್ನು ಸೃಷ್ಟಿಸಿದ್ದ ಶಿವಾಜಿ ಅವರ ಆಡಳಿತ ಅವಧಿಯಲ್ಲಿ ಎಲ್ಲ ಧರ್ಮಗಳ ಪರ ಇದ್ದರು. ಸರ್ವ- ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮರಾಠ ದೊರೆ ಶಾಹು ಮಹಾರಾಜ್ ದೇಶದಲ್ಲಿಯೇ ಮೊದಲ ಬಾರಿಗೆ ಮೀಸಲಾತಿಯನ್ನು ಜಾರಿಗೆ ತಂದು ತುಳಿತಕ್ಕೊಳಗಾದವರಿಗೆ ಅವಕಾಶ ನೀಡಿದರು. ಅಂಬೇಡ್ಕರ್ ಅವರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡಿದರು. ಹೀಗೇ ಅನೇಕ ರೀತಿಯಲ್ಲಿ ಮರಾಠರು ದೇಶಕ್ಕೆ ಕೊಡುಗೆಗಳನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡರು.
ಶ್ರೀಮಂತರ, ಅಧಿಕಾರಸ್ಥರ ಮಕ್ಕಳು ಉನ್ನತ ಹುದ್ದೆಗೆ ಹೋಗುವುದು ದೊಡ್ಡ ವಿಷಯವಲ್ಲ. ಕಟ್ಟಕಡೆಯ ವ್ಯಕ್ತಿಗಳ ಮಕ್ಕಳು ಹೋಗಬೇಕು. ಅದಕ್ಕಾಗಿ ಬಡವರ ಮಕ್ಕಳು ವಿದೇಶ ವ್ಯಾಸಂಗ ಮಾಡಲು ನೀಡಲಾಗುತ್ತಿದ್ದ ಮೊತ್ತವನ್ನು ₹ 25 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದರು.
ಹೋಟೆಲ್ ಉದ್ಯಮ ನಡೆಸುವವರಿಗೆ ₹ 5 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಕನಕಗಿರಿ ಕ್ಷೇತ್ರದಲ್ಲಿ ಇರುವ ಸಂಭಾಜಿ ಸಮಾಧಿಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮರಾಠ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಸಾರಥಿ ಯೋಜನೆಯಡಿ ಕಾರುಗಳನ್ನು ವಿತರಿಸಲಾಯಿತು. ಗೋಸಾಯಿ ಸಂಸ್ಥಾನದ ಮಂಜುನಾಥ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಉದಯ್ ಬಿ.ಗರುಡಾಚಾರ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ, ಮರಾಠ ಅಸೋಸಿಯೇಶನ್ ಅಧ್ಯಕ್ಷ ಮನೋಜ್ ಕುಮಾರ್, ಸಾಹಿತಿ ಜಗನ್ನಾಥರಾವ್ ಬಹುಳೆ, ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ, ಮರಾಠ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಆರ್. ಪಾಗೋಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.