ಚಿಕ್ಕಬಾಣಾವರದಲ್ಲಿ 25 ವರ್ಷಗಳ ಹಿಂದೆ ಮುಚ್ಚಿದ್ದ ರೈಲ್ವೆ ಕೆಳಸೇತುವೆಯನ್ನು ತೆರವುಗೊಳಿಸಲಾಯಿತು. ಶಾಸಕ ಎಸ್. ಮುನಿರಾಜು, ಪುರಸಭೆ ಅಧಿಕಾರಿಗಳು ಹಾಜರಿದ್ದರು
ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದ ಇತಿಹಾಸ ಪ್ರಸಿದ್ಧ ಕೋಟೆ ಮಾರಮ್ಮ ಜಾತ್ರೆಯ ಪ್ರಯುಕ್ತ 25 ವರ್ಷಗಳ ಹಿಂದೆ ಮುಚ್ಚಿದ್ದ ರೈಲ್ವೆ ಕೆಳಸೇತುವೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆರವುಗೊಳಿಸಲಾಯಿತು.
ಈ ಕೆಳಸೇತುವೆ ಮುಚ್ಚಿದ್ದರಿಂದ, ಅಕ್ಕಪಕ್ಕದ ಗ್ರಾಮಗಳವರು ನೇರವಾಗಿ ಚಿಕ್ಕಬಾಣಾವರವನ್ನು ತಲುಪಲು ತುಂಬಾ ತೊಂದರೆಯಾಗಿತ್ತು. ಇದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಶಾಸಕ ಎಸ್. ಮುನಿರಾಜು ಅವರಿಗೆ ಮನವಿ ಮಾಡಿದ್ದರು.
‘ಗ್ರಾಮಸ್ಥರ ಮನವಿ ಮೇರಗೆ, ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತಂದು, ರೈಲ್ವೆ ಕೆಳಸೇತುವೆಯನ್ನು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಈ ರೈಲ್ವೆ ಅಂಡರ್ ಪಾಸ್ ಹಾಗೂ ಇದಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಸ್ಥಳೀಯ ಗ್ರಾಮಸ್ಥ ಬಿ.ಎಂ. ಚಿಕ್ಕಣ್ಣ ಮಾತನಾಡಿ, 'ಬಹಳ ವರ್ಷಗಳ ಹಿಂದೆ ಜನರು ಎತ್ತಿನ ಗಾಡಿ ಬೈಸಿಕಲ್, ಆಟೊಗಳಲ್ಲಿ ಇದೇ ಅಂಡರ್‌ಪಾಸ್ ಮೂಲಕ ಓಡಾಡುತ್ತಿದ್ದರು. ಗಣಪತಿನಗರ, ವೀರಶೆಟ್ಟಿಹಳ್ಳಿ ಶಾಂತಿನಗರ, ರಾಘವೇಂದ್ರ ಬಡಾವಣೆ ಮತ್ತಿತರ ಗ್ರಾಮಗಳಿಂದ ಜನರು ನೇರವಾಗಿ ಚಿಕ್ಕಬಾಣಾವರಕ್ಕೆ ಇದೇ ಮಾರ್ಗದಲ್ಲಿ ಬರುತ್ತಿದ್ದರು. ಗ್ರಾಮ ಅಭಿವೃದ್ಧಿಯಾದಂತೆ ಅಂಡರ್ ಪಾಸ್ ಮುಚ್ಚಲಾಗಿತ್ತು. ಈಗ ಮತ್ತೆ ತೆರವುಗೊಳಿಸಿರುವುದು, ಅಕ್ಕಪಕ್ಕದ ಗ್ರಾಮಸ್ಥರಿಗೆ ಅನುಕೂಲವಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಾಣಾವರ ಪುರಸಭೆಯ ಮುಖ್ಯಅಧಿಕಾರಿ ಸಂದೀಪ್, ಗ್ರಾಮಸ್ಥರಾದ ವೆಂಕಟೇಶ್, ಕಬೀರ್, ಚಿಕ್ಕಣ್ಣ, ನವೀನ್, ಬಿ. ಎಲ್. ಎನ್. ಸಿಂಹ, ದಿಲೀಪ್ ಸಿಂಹ, ಸುರೇಶ್ ಕಾಡೆ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.