ಅಮಾನತು
ಬೆಂಗಳೂರು: ಕರ್ತವ್ಯದ ವೇಳೆ ಪಾನಮತ್ತರಾಗಿ ದುರ್ವರ್ತನೆ ತೋರುತ್ತಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಸೋಮಶೇಖರ್ ಪಿ. ಅವರನ್ನು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಅವರು ಅಮಾನತು ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಅರಿವಳಿಕೆ ನೀಡುವ ಸಮಯದಲ್ಲಿ ಕುಡಿತದ ಅಮಲಿನಲ್ಲಿರುತ್ತಿದ್ದ ಸೋಮಶೇಖರ್ ಅವರಿಗೆ ಚುಚ್ಚುಮದ್ದು ನೀಡಲು ಸಾಧ್ಯವಾಗದೇ ಇರುವ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದವು. ತಡವಾಗಿ ಕಚೇರಿಗೆ ಬರುವುದು, ಬರುವಾಗ ಮದ್ಯ ಸೇವಿಸಿರುವುದು ಕಂಡು ಬಂದಿದ್ದರಿಂದ ನಾಲ್ಕು ಬಾರಿ ನೋಟಿಸ್ ನೀಡಿದ್ದರೂ ಡಾ. ಸೋಮಶೇಖರ್, ಉತ್ತರ ನೀಡದೇ ದುರ್ನಡತೆ ತೋರಿದ್ದರು. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಜಿಲ್ಲಾಧಿಕಾರಿಯವರು ಆಯುಕ್ತರಿಗೆ ವರದಿ ಸಲ್ಲಿಸಿದ್ದರು.
ಈ ವರದಿಯ ಅನ್ವಯ ಸೋಮಶೇಖರ್ ಅವರನ್ನು ತಕ್ಷಣದಿಂದ ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಅವರ ಲೀನ್ ಅನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ನೇತ್ರ ತಜ್ಞರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.