ಬೆಂಗಳೂರು: ಬಾಣಸವಾಡಿ ಸಮೀಪದ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾದ ಬೆನ್ನಲ್ಲೇ, ಬುಧವಾರ ನಸುಕಿನಲ್ಲಿ ಕೆಂಪಾಪುರ ಅಗ್ರಹಾರ 24ನೇ ಅಡ್ಡರಸ್ತೆಯಲ್ಲಿನ ಡಾ.ವಿಷ್ಣುವರ್ಧನ್ ಪ್ರತಿಮೆ ಬಳಿ ಇನ್ನೊಂದು ಹೆಣ್ಣು ಶಿಶು ಸಿಕ್ಕಿದೆ.
ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ವೀರೇಶ್ ಎಂಬುವರಿಗೆ ಸೇರಿದ ಮನೆ ಇದ್ದು, ಅವರು ಹೊರಗಡೆ ಶೌಚಾಲಯ ಕಟ್ಟಿಸಿದ್ದಾರೆ. ಮಂಗಳವಾರ ಸಂಜೆ ಕೆಟ್ಟ ವಾಸನೆ ಬರುತ್ತಿದ್ದರಿಂದ ವೀರೇಶ್ ಶೌಚಾಲಯಕ್ಕೆ ಹೋಗಿ ನೋಡಿದಾಗ, ಪ್ಲಾಸ್ಟಿಕ್ ಕವರ್‌ನಲ್ಲಿ ಶಿಶುವಿನ ಶವ ಪತ್ತೆಯಾಗಿತ್ತು. ಕೂಡಲೇ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
‘ದಿನದ ಹಿಂದಷ್ಟೇ ಜನಿಸಿದ್ದ ಮಗುವನ್ನು ಕವರ್‌ನಲ್ಲಿ ತುಂಬಿದ್ದರಿಂದ, ಅದು ಸತ್ತು ಹೋಗಿತ್ತು. ನಾವೇ ಅಂತ್ಯ ಕ್ರಿಯೆ ಮುಗಿಸಿದೆವು. ಮಗು ತಂದಿಟ್ಟವರ ಪತ್ತೆಗೆ ತನಿಖೆ ನಡೆಯುತ್ತಿದ್ದು, ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಬಾಣಸವಾಡಿ ಪೊಲೀಸರು ಹೇಳಿದರು.
ಇನ್ನೊಂದು ಶಿಶು: ಬುಧವಾರ ಬೆಳಿಗ್ಗೆ ಯಾರೋ ವಿಷ್ಣುವರ್ಧನ್ ಸ್ಮಾರಕದ ಬಳಿ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗು ಅಳುತ್ತಿದ್ದ ಸದ್ದು ಕೇಳಿ ಸ್ಥಳೀಯರು ಸ್ಮಾರಕದ ಹತ್ತಿರ ಹೋದಾಗ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಶಿಶು ಪತ್ತೆಯಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ನಿಮ್ಹಾನ್ಸ್ ಆಸ್ಪತ್ರೆ ರಸ್ತೆಯಲ್ಲಿರುವ ಮಕ್ಕಳ ಆರೈಕೆ ಕೇಂದ್ರದ ಸುಪರ್ದಿಗೆ ಒಪ್ಪಿಸಿದ್ದಾರೆ.
ಈ ವಾರದಲ್ಲೇ ನಗರದಲ್ಲಿ ನಾಲ್ಕು ಶಿಶುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.