ADVERTISEMENT

ಪ್ರಣಾಳಿಕೆಯಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ: ಮಕ್ಕಳ ಹಕ್ಕುಗಳ ಸಂಚಾಲಕ, ವಾಸುದೇವ

​ಪ್ರಜಾವಾಣಿ ವಾರ್ತೆ
Published 4 ಮೇ 2023, 4:40 IST
Last Updated 4 ಮೇ 2023, 4:40 IST
ಕಡತ ಚಿತ್ರ
ಕಡತ ಚಿತ್ರ   

ಬೆಂಗಳೂರು: ‘ವಿಧಾನಸಭೆ ಚುನಾವಣೆಗಾಗಿ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿವೆ. ಆದರೆ, ಯಾವ ಪಕ್ಷವೂ ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿಲ್ಲ’ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ರಾಜ್ಯ ಸಂಚಾಲಕ ವಾಸುದೇವ ಶರ್ಮಾ ಎನ್. ವಿ. ಕಳವಳ ವ್ಯಕ್ತಪಡಿಸಿದ್ದಾರೆ.

‌‘ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ದೈಹಿಕ ಮಾನಸಿಕ ಅಥವಾ ಮೇಲಿನ ಲೈಂಗಿಕ ದೌರ್ಜನ್ಯಗಳ ನಿವಾರಣೆಯ ಬಗ್ಗೆ ಯಾವುದೇ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸದಿರುವುದು ಆಘಾತಕಾರಿ ಸಂಗತಿ’ ಎಂದರು.

‘ಕೇಂದ್ರ ಸರ್ಕಾರವು ಸ್ವಯಂಸೇವಾ ಸಂಘಟನೆಗಳಿಂದ ಚೈಲ್ಡ್‌ಲೈನ್‌ ಸಂಖ್ಯೆ 1098 ಹಿಂಪಡೆಯಲು ನಿರ್ಧರಿಸಿದೆ. ಅದನ್ನು ರಾಜ್ಯ ಸರ್ಕಾರದ ಪೊಲೀಸರೊಂದಿಗೆ 112 ಸಹಾಯವಾಣಿಯ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಹಲವಾರು ಎನ್‌ಜಿಒಗಳು ಮತ್ತು ಮಕ್ಕಳ ಗುಂಪುಗಳು ರಾಜಕೀಯ ಪಕ್ಷಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಕ್ಕಳ ಪಾಲನಾ ಸಂಸ್ಥೆಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಮಕ್ಕಳ ನ್ಯಾಯ ಮಂಡಳಿಗಳು, ಮಕ್ಕಳ ನ್ಯಾಯಾಲಯಗಳು ಮತ್ತು ಪೊಕ್ಸೊ ನ್ಯಾಯಾಲಯಗಳು, ಮಕ್ಕಳ ವಿಶೇಷ ಪೊಲೀಸ್‌ ಘಟಕಗಳನ್ನು ಒಳಗೊಂಡಿರುವ ಪಾಲನಾ ವ್ಯವಸ್ಥೆಗಳನ್ನು ನಡೆಸಲು ಸಾಕಷ್ಟು ಹಣ ಒದಗಿಸಬೇಕು. ಆದರೆ, ರಾಜಕೀಯ ಪಕ್ಷಗಳು ಇದರ ಬಗ್ಗೆ ನಿರಾಸಕ್ತಿ ತೋರಿವೆ. ಇತ್ತೀಚೆಗೆ ಮಕ್ಕಳ ಮೇಲಿನ ಅಪರಾಧಗಳು ಹೆಚ್ಚುತ್ತಿರುವ ಎನ್‌ಸಿಆರ್‌ಬಿ ವರದಿ ನೀಡಿದೆ’ ಎಂದು ತಿಳಿಸಿದ್ದಾರೆ.

‘ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗುವ ಮೊದಲು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮಂಡಿಸಿದ ಮಕ್ಕಳ ಬೇಡಿಕೆಗಳನ್ನು ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.