ADVERTISEMENT

ಮಕ್ಕಳ ಕಳ್ಳಸಾಗಣೆ: ಎಸ್‌ಐಟಿ ರಚಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:36 IST
Last Updated 24 ಏಪ್ರಿಲ್ 2021, 20:36 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಗರದಲ್ಲಿ ಮಕ್ಕಳ ಕಳ್ಳಸಾಗಣೆಯ ಗಂಭೀರ ಸಮಸ್ಯೆ ಪರಿಗಣಿಸಿ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವ ಸಲಹೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿರುವ ವರದಿಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವಂತೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದ ಆದೇಶದ ಮೇರೆಗೆ ಕೆಎಸ್‌ಎಲ್‌ಎಸ್‌ಎ ಈ ಸಮೀಕ್ಷೆ ನಡೆಸಿತ್ತು. ‘ನಗರದ 432 ಸ್ಥಳಗಳಲ್ಲಿ ಆಟಿಕೆ ಮಾರಾಟ ಮಾಡುವ886 ಮಕ್ಕಳಿದ್ದು, ಅವರಲ್ಲಿ 720 ಮಕ್ಕಳ ಮಾಹಿತಿ ಸಂಗ್ರಹಿಸಲಾಗಿದೆ. ಇವರಲ್ಲಿ 27 ಮಕ್ಕಳನ್ನು ಮಾಫಿಯಾ ಭಿಕ್ಷಾಟನೆಗೆ ದೂಡಿದೆ’ ಕೆಎಸ್‌ಎಲ್‌ಎಸ್‌ಎ ತಂಡ ವರದಿ ಸಲ್ಲಿಸಿತ್ತು.

ADVERTISEMENT

‘ಈ ವಿಷಯದ ಸಂಬಂಧ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದ ಬಳಿಕ ವಿವರವಾದ ನಿರ್ದೇಶನ ನೀಡಲಾಗುವುದು. ಈ ಪ್ರಕರಣದಲ್ಲಿ ಎಲ್ಲಾ ಭಾಗಿದಾರ ಸಭೆಯನ್ನು ಮೇ ಕೊನೆಯ ವಾರದಲ್ಲಿ ಕರೆಯುಬೇಕು’ ಎಂದು ಕೆಎಸ್‌ಎಲ್‌ಎಸ್‌ಎ ಕಾರ್ಯದರ್ಶಿಗೆ ಪೀಠ ಸೂಚನೆ ನೀಡಿತು. ‌

‘ಬೆಂಗಳೂರು ನಗರದಲ್ಲಿ ಮತ್ತು ವಿಶೇಷವಾಗಿ ಮಕ್ಕಳ ಕಳ್ಳಸಾಗಣೆಗೆ ಅವಕಾಶ ಇರುವುದು ಪ್ರಶ್ನಾರ್ಹವಾಗಿದೆ. ಹೀಗಾಗಿ, ಬಾಲ ನ್ಯಾಯ(ಜೆ.ಜೆ) ಕಾಯ್ದೆಯಡಿ ರಚಿಸಿರುವ ಎಲ್ಲಾ ಸಂಸ್ಥೆಗಳನ್ನು ಪುರುಜ್ಜೀವನಗೊಳಿಸುವ ಅಗತ್ಯವಿದೆ’ ಎಂದು ತಿಳಿಸಿತು.

ನೋಂದಾಯಿಸದ ಕೇಂದ್ರಗಳ ವಿರುದ್ಧ ಕ್ರಮ: ರಾಜ್ಯದಲ್ಲಿ ನೋಂದಾಯಿಸದ ಮಕ್ಕಳ ಆರೈಕೆ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.

ವಿಜಯನಗರದಲ್ಲಿ ಈ ರೀತಿಯ ಕೇಂದ್ರವೊಂದು ಸರ್ಕಾರಿ ಶಾಲೆ ಆವರಣದಲ್ಲಿ ನಡೆಯುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಯೇ ಈ ಕೇಂದ್ರ ನಡೆಸುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿತು. ಈ ಕೇಂದ್ರದಲ್ಲಿ 14 ಬಾಲಕಿಯರು, 19 ಬಾಲಕರು ಇದ್ದಾರೆ. ರಾಜ್ಯದಲ್ಲಿ ಈ ರೀತಿಯ 53 ಸಂಸ್ಥೆಗಳಿದ್ದು, ಮಕ್ಕಳ ಕಳ್ಳಸಾಗಣೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳಿವೆ ಎಂಬ ಕೆಎಸ್‌ಎಲ್‌ಎಸ್‌ಎ ವರದಿಯನ್ನು ಪೀಠ ಉಲ್ಲೇಖಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.