ADVERTISEMENT

‘ಬರೀ ಓದು ಎನ್ನುತ್ತೀರಾ‘ ಎಂದು ಮನೆ ಬಿಟ್ಟು ಹೋಗಿದ್ದ ಬೆಂಗಳೂರಿನ ಮಕ್ಕಳು ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 5:56 IST
Last Updated 11 ಅಕ್ಟೋಬರ್ 2021, 5:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: '‘ಬರೀ ಓದು ಎನ್ನುತ್ತೀರಾ, ಆದರೆ, ನಾವು ಕ್ರೀಡೆಯಲ್ಲಿ ಸಾಧನೆ ಮಾಡಿ, ಹೆಸರು ಹಾಗೂ‌ ಹಣ ಸಂಪಾದನೆ‌ ಮಾಡುತ್ತೇವೆ' ಎಂದು ಪತ್ರ ಬರೆದಿಟ್ಟು ಭಾನುವಾರ ನಾಪತ್ತೆಯಾಗಿದ್ದ‌ ಮಕ್ಕಳು, ನಗರದ ಆನಂದರಾವ್‌ ವೃತ್ತದಲ್ಲಿ ಸೋಮವಾರ ನಸುಕಿನಲ್ಲಿ ಪತ್ತೆಯಾಗಿದ್ದಾರೆ.

ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ‌ವಾಸವಿದ್ದ ಮೂವರು ಮಕ್ಕಳಾದ ಪರೀಕ್ಷಿತ್, ನಂದನ್ ಹಾಗೂ ಕಿರಣ್, ವಾಯುವಿಹಾರಕ್ಕೆ‌ ಹೋಗಿ ಬರುವುದಾಗಿ‌‌ ಹೇಳಿ ಹೋದವರು ಮನೆಗೆ ವಾಪಸು ಬಂದಿರಲಿಲ್ಲ. ಗಾಬರಿಗೊಂಡಿದ್ದ ಪೋಷಕರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಗಂಭೀರವಾಗಿದ್ದರಿಂದ‌ ಮಕ್ಕಳ ಪತ್ತೆಗಾಗಿ‌ ವಿಶೇಷ ತಂಡ ರಚಿಸಲಾಗಿತ್ತು.

'ಭಾನುವಾರ‌ ಮೈಸೂರಿಗೆ ಹೋಗಿದ್ದರು ಎನ್ನಲಾದ ಮಕ್ಕಳು, ಅಲ್ಲಿಂದ ತಡರಾತ್ರಿ ಬೆಂಗಳೂರಿಗೆ ವಾಪಸು ಬಂದಿದ್ದರು. ಆನಂದರಾವ್ ವೃತ್ತದ ಬಳಿ‌ ನಸುಕಿನಲ್ಲಿ ಸುತ್ತಾಡುತ್ತಿದ್ದರು. ಅವರನ್ನು ಚಿಂದಿ ಆಯುವ ವ್ಯಕ್ತಿಯೊಬ್ಬರು ಮಾತನಾಡಿಸಿದ್ದರು. ಆದರೆ, ಮಕ್ಕಳು ಮಾತನಾಡದೇ ಓಡಿ ಹೋಗಿದ್ದರು. ಅನುಮಾನಗೊಂಡ ಚಿಂದಿ ಆಯುವ ವ್ಯಕ್ತಿ, ಸಮೀಪದಲ್ಲೇ ಇದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ವಿಷಯ ತಿಳಿಸಿದ್ದರು' ಎಂದು ಪೊಲೀಸರು ಹೇಳಿದರು.

ADVERTISEMENT

'ಮಕ್ಕಳ ಬಳಿ ಹೋಗಿದ್ದ ಪೊಲೀಸರು, ಮೂವರನ್ನೂ ಮಾತನಾಡಿಸಿದ್ದರು. ಮನೆ ಬಿಟ್ಟು ಬಂದಿರುವುದಾಗಿ ಮಕ್ಕಳು ಹೇಳಿದ್ದರು. ನಂತರ, ಪೊಲೀಸರು ನಿಯಂತ್ರಣ ‌ಕೊಠಡಿಗೆ ಕರೆ‌ ಮಾಡಿ ಮಾಹಿತಿ ನೀಡಿದ್ದರು. ಬಾಗಲಗುಂಟೆ ಠಾಣೆ ವ್ಯಾಪ್ತಿಯಿಂದ ‌ಕಾಣೆಯಾಗಿದ್ದ‌ ಮಕ್ಕಳು ಇವರೇ ಎಂಬುದು ಖಾತ್ರಿಯಾಯಿತು' ಎಂದೂ ತಿಳಿಸಿದರು.

'ಮೂವರು ಮಕ್ಕಳು, ಎಸ್ಸೆಸ್ಸೆಲ್ಸಿ ಓದುತ್ತಿದ್ದರು. ಅವರನ್ನು ಪೋಷಕರ ಸುಪರ್ದಿಗೆ ವಹಿಸುವ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿದೆ' ಎಂದೂ ವಿವರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.