ADVERTISEMENT

ತಾಜಾ ಮೇಲೋಗರಕ್ಕೆ ಬಂದಿದೆ ಚಿಲ್ಡ್‌ ಚಟ್ನಿ ಕಾರ್ಟ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 20:14 IST
Last Updated 11 ಆಗಸ್ಟ್ 2018, 20:14 IST
   

ಬೆಂಗಳೂರು: ರಸ್ತೆಬದಿ ಆಹಾರ ಮಾರಾಟಗಾರರಿಗೆ ಸ್ವಚ್ಛ ಹಾಗೂ ತಾಜಾ ಚಟ್ನಿ, ಸಾಸ್‌, ಕೆಚಪ್‌ ಮತ್ತಿತರ ಮೇಲೋಗರ ಪೂರೈಸಲು ಶೀಥಲೀಕರಣ ವ್ಯವಸ್ಥೆಯುಳ್ಳ ಚಟ್ನಿ ಗಾಡಿ (ಚಿಲ್ಡ್‌ ಚಟ್ನಿ ಕಾರ್ಟ್‌) ಬಂದಿದೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಹ್ಯಾಕಥಾನ್‌ ಕಾರ್ಯಕ್ರಮದಲ್ಲಿ ಟೀಮ್‌ 3ಸಿ ಮೂಲಕ ಆಕರ್ಷ್‌ ಎಂಬುವವರು ಈ ವ್ಯವಸ್ಥೆಯೊಂದನ್ನು ಪರಿಚಯಿಸಿದ್ದಾರೆ. ಮಾತ್ರವಲ್ಲ ಸಂಜಯನಗರದ ಫುಡ್‌ ಸ್ಟ್ರೀಟ್‌ನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ಆ. 15ರವರೆಗೆ ಈ ಪ್ರಯೋಗ ಮುಂದುವರಿಯಲಿದೆ.

ಏನು ಪರಿಕಲ್ಪನೆ?
ಬೀದಿಬ‌ದಿಯ ವ್ಯಾಪಾರಿಗಳು ಕೊಡುವ ಚಾಟ್‌ ಪದಾರ್ಥಗಳಲ್ಲಿ ಸ್ವಚ್ಛತೆ, ತಾಜಾತನದ ಬಗ್ಗೆ ಗ್ರಾಹಕರಿಗೆ ಸಂದೇಹವೇ ಇದೆ. ಅದು ಬಹುಪಾಲು ಸತ್ಯವೂ ಹೌದು. ಬೆಳಿಗ್ಗೆ ತಯಾರಿಸಿದ ಚಟ್ನಿ, ಸಾಸ್‌ ಸಂಜೆ ಮಾರಾಟದ ವೇಳೆಗೆ ಕೆಟ್ಟುಹೋಗುವ ಸಾಧ್ಯತೆಯೇ ಹೆಚ್ಚು. ಅದಕ್ಕಾಗಿ ಟೀಮ್‌ 3ಸಿ ಈ ಯೋಜನೆ ರೂಪಿಸಿದೆ. ಚಟ್ನಿ, ಸಾಸ್‌, ಕೆಚಪ್‌ ಮತ್ತಿತರ ಮೇಲೋಗರಗಳನ್ನು ಒಂದೆಡೆ ಸುರಕ್ಷಿತವಾಗಿ ತಯಾರಿಸಿ ಶೀಥಲ ಘಟಕದಲ್ಲಿ ಸಂರಕ್ಷಿಸಿಡಲಾಗುತ್ತದೆ. ಅಲ್ಲಿಂದ ಪುಟ್ಟ ಫ್ರಿಡ್ಜ್‌ಗಳನ್ನು ಅಳವಡಿಸಿದ ವಾಹನಗಳಲ್ಲಿ ತುಂಬಿ ಮಾರಾಟದ ಸ್ಥಳಗಳಿಗೆ ಆ ವೇಳೆಯಲ್ಲೇ ತಲುಪಿಸಲಾಗುತ್ತದೆ. ಹೀಗಾದಾಗ ಆಹಾರ ಪದಾರ್ಥ ಶುದ್ಧ ಹಾಗೂ ಸ್ವಚ್ಛವಾಗಿ ಇರುತ್ತದೆ.

ADVERTISEMENT

ಈ ಪರಿಕಲ್ಪನೆ ಜಾರಿಗೂ ಮುನ್ನ ತಂಡದ ಸದಸ್ಯರು ಸಂಜಯನಗರದ ರಾಧಾಕೃಷ್ಣ ದೇವಸ್ಥಾನದ ಬಳಿಯ ಫುಡ್‌ ಸ್ಟ್ರೀಟ್‌ನಲ್ಲಿ ಸಮೀಕ್ಷೆ ನಡೆಸಿದರು. 11 ವ್ಯಾಪಾರಿಗಳು ಆಹಾರ ಪದಾರ್ಥಗಳು ಕೆಡುವ ಸಾಧ್ಯತೆಯನ್ನು ಒಪ್ಪಿಕೊಂಡದ್ದೂ ಇದೆ. ಇಲ್ಲಿನ ಚಟ್ನಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಕ್ಕೆ ಒಳಪಡಿಸಿದರು. ಸಂಗ್ರಹಿಸಿದ ಮಾದರಿಗಳಲ್ಲಿ ಕೆಲವು ಕೆಟ್ಟು ಹೋಗಿದ್ದವು.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು 3ಸಿ ತಂಡ ಸಿದ್ಧವಾಗಿದೆ.

ಒಂದು ಘಟಕದಲ್ಲಿ ವ್ಯಾಪಾರಿಗಳು ತಮ್ಮದೇ ಆದ ರೀತಿಯಲ್ಲಿ ಚಟ್ನಿ, ಮೇಲೋಗರ ಸಿದ್ಧಪಡಿಸಲು ಅವಕಾಶ ನೀಡುವುದು‌ ಅಥವಾ ಇದೇ ಘಟಕದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು. ಇಲ್ಲಿ ಶೀಥಲ ಸಂಸ್ಕರಣಾ ಘಟಕವೂ ಇರುತ್ತದೆ. ವ್ಯಾಪಾರದ ವೇಳೆಯಲ್ಲಿ ಅದೇ ಶೀಥಲ ವ್ಯವಸ್ಥೆಯ ಸಹಿತ ವಾಹನಗಳಲ್ಲಿ ವ್ಯಾಪಾರದ ಸ್ಥಳಗಳಿಗೆ ಚಟ್ನಿ ಪೂರೈಸಲಾಗುತ್ತದೆ. ವ್ಯಾಪಾರದ ಸ್ಥಳದಲ್ಲಿ ತಾಜಾತನ ಉಳಿಸಿಕೊಳ್ಳಲು ಪಾತ್ರೆಯ ತಳಭಾಗಕ್ಕೆ ಇರಿಸಲು ಐಸ್‌ ಬ್ಯಾಗನ್ನೂ ಒದಗಿಸಲಾಗುತ್ತದೆ.

ಕೆಲವು ವ್ಯಾಪಾರಿಗಳು ಈ ಸೇವೆ ಪಡೆಯಲು ಸಮ್ಮತಿಸಿದ್ದಾರೆ. ಪ್ರತಿ ಉತ್ಪನ್ನದ ಸಂರಕ್ಷಿತ ಪೂರೈಕೆಗೆ ₹ 5ರಿಂದ ₹ 20ರವರೆಗೆ ಕೊಡಲು ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಆಕರ್ಷ್‌.

ಈ ಯೋಜನೆಗೆ ರಿಇಮ್ಯಾಜಿನ್‌ ವೇಸ್ಟ್‌, ಸೆಂಟರ್‌ ಫಾರ್‌ ಪ್ರೊಡಕ್ಟ್‌ ಡಿಸೈನ್‌ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್‌, ವೇಸ್ಟ್‌ ಇಂಪ್ಯಾಕ್ಟ್‌, ಸಿಟಿಝನ್‌ ಫಾರ್‌ ಸಸ್ಟೈನೆಬಿಲಿಟಿ ಸಂಸ್ಥೆಗಳು ಕೈ ಜೋಡಿಸಿವೆ. ಸದ್ಯ ಯಾವುದೇ ಪ್ರತಿಸ್ಪರ್ಧಿಗಳಿಲ್ಲದ ಈ ಯೋಜನೆಯನ್ನು ನಗರದಾದ್ಯಂತ ವ್ಯಾಪಕವಾಗಿ ವಿಸ್ತರಿಸಬಹುದು ಎಂಬ ಚಿಂತನೆ ಟೀಮ್‌ 3ಸಿಯದ್ದು.
ಮಾಹಿತಿಗೆ ಆಕರ್ಷ್‌ ಅವರ ಮೊಬೈಲ್‌:97406-99399 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.