ADVERTISEMENT

ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹೊಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 23:30 IST
Last Updated 19 ನವೆಂಬರ್ 2025, 23:30 IST
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ನೋಟ 
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ನೋಟ    

ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್‌ 4ರಂದು ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ನಡೆಸಿರುವ ಸಿಐಡಿ, ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. 2,200 ಪುಟಗಳ ದೋಷಾರೋಪ ಪಟ್ಟಿ ಸಿದ್ಧವಾಗಿದೆ.

ಕಾಲ್ತುಳಿತದಿಂದಾಗಿ 11 ಮಂದಿ ಮೃತಪಟ್ಟಿದ್ದರು. ಈ ಬಗ್ಗೆ ಶೀಘ್ರದಲ್ಲೇ ಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದರು. 

‘ದುರಂತಕ್ಕೆ ಕೆಎಸ್‌ಸಿಎ, ಡಿಎನ್‌ಎ (ಇ–ವೆಂಟ್‌ ಮ್ಯಾನೇಜ್‌ಮೆಂಟ್‌) ಹಾಗೂ ಆರ್‌ಸಿಬಿ ಫ್ರಾಂಚೈಸಿ ಕಾರಣ. ಮೂರೂ ಸಂಸ್ಥೆಗಳು ಲೋಪ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿವೆ. ಹಲವು ಸಾಕ್ಷ್ಯಗಳು ಸಿಕ್ಕಿವೆ. ಎಲ್ಲವನ್ನೂ ಕ್ರೋಡೀಕರಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಗಾಯಾಳುಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿತ್ತು. ತನಿಖೆ ವೇಳೆ ಮೂರು ಸಂಸ್ಥೆಗಳ ಲೋಪಗಳು ಪತ್ತೆಯಾಗಿವೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಿಜಯೋತ್ಸವಕ್ಕೂ ಮುನ್ನ ಸರಿಯಾದ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಪೊಲೀಸ್‌ ಅಧಿಕಾರಿಗಳಿಗೆ ಮೊದಲೇ ಮಾಹಿತಿ ನೀಡಿರಲಿಲ್ಲ. ತರಾತುರಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟವಾಗಿತ್ತು ಎಂದು ಮೂಲಗಳು ಹೇಳಿವೆ.

ಟಿಕೆಟ್ ಬಗ್ಗೆ ಆರ್​​ಸಿಬಿ ಗೊಂದಲ ಹುಟ್ಟಿಸಿದ್ದು ಘಟನೆಗೆ ಮೊದಲ ಕಾರಣವಾಗಿದೆ. ಭದ್ರತಾ ವಿಚಾರವಾಗಿ ಡಿಎನ್ಎಯಿಂದ ವ್ಯವಸ್ಥೆ ಆಗಿರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯೂ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ಘಟನೆಯ ಬಳಿಕ ಕಬ್ಬನ್‌ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ಮೃತ ಕುಟುಂಬಸ್ಥರ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಕೆಎಸ್‌ಸಿಎ, ಡಿಎನ್‌ಎ (ಇ–ವೆಂಟ್‌ ಮ್ಯಾನೇಜ್‌ಮೆಂಟ್‌) ಹಾಗೂ ಆರ್‌ಸಿಬಿ ಫ್ರಾಂಚೈಸಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ನಾಲ್ವರನ್ನು ಬಂಧಿಸಿದ್ದರು.

ಅದಾದ ಮೇಲೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ಎರಡೂ ಪ್ರಕರಣಗಳ ತನಿಖೆಯನ್ನೂ ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿತ್ತು. ಕಾಲ್ತುಳಿತ ಘಟನೆಗೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಿರುವ ಸಿಐಡಿ ತನಿಖಾಧಿಕಾರಿಗಳು ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಿದ್ದಾರೆ.

‘ಕ್ರೀಡಾಂಗಣದ ಗೇಟ್‌ಗಳ ಬಳಿಯ ಅವ್ಯವಸ್ಥೆ, ಪೊಲೀಸರ ನಿಯೋಜನೆ ಹಾಗೂ ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಈ ಎಲ್ಲ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆರ್‌ಸಿಬಿ ವಿಜಯೋತ್ಸವಕ್ಕೆ ಸೇರಿದ್ದ ಕ್ರಿಕೆಟ್‌ ಅಭಿಮಾನಿಗಳು (ಸಂಗ್ರಹ ಚಿತ್ರ)  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.