ADVERTISEMENT

ಬೆಂಗಳೂರು: ‘ದಿಲ್ಲಿ ಹಾಟ್’ ಮಾದರಿ ಸಿಕೆಪಿಯಲ್ಲಿ ‘ಚಿತ್ತಾರ’

ಒಂದೇ ಸೂರಿನಡಿ ದೇಶದ ವಿವಿಧ ಭಾಗಗಳ ಕಲಾಕೃತಿ, ಕರಕುಶಲ ವಸ್ತುಗಳ ಪ್ರದರ್ಶನ

ವರುಣ ಹೆಗಡೆ
Published 29 ಅಕ್ಟೋಬರ್ 2025, 0:30 IST
Last Updated 29 ಅಕ್ಟೋಬರ್ 2025, 0:30 IST
<div class="paragraphs"><p>ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆಗಳ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು</p><p>ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.</p></div>

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆಗಳ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

   

ಬೆಂಗಳೂರು: ನವದೆಹಲಿಯಲ್ಲಿ ಇರುವ ‘ದಿಲ್ಲಿ ಹಾಟ್’ ಮಾದರಿಯಲ್ಲಿಯೇ ದೇಶದ ವಿವಿಧ ಭಾಗಗಳ ಕಲಾಕೃತಿ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ (ಸಿಕೆಪಿ) ಆವರಣದಲ್ಲಿ ‘ಚಿತ್ತಾರ’ ಮಳಿಗೆಗಳು ತಲೆಯೆತ್ತುತ್ತಿವೆ. 

ADVERTISEMENT

‘ದಿಲ್ಲಿ ಹಾಟ್’ ತೆರೆದ ಮಾರುಕಟ್ಟೆಯನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡುತ್ತಿದೆ. ಅಲ್ಲಿ ದೇಶದ ವಿವಿಧ ಭಾಗಗಳ ಪ್ರಸಿದ್ಧ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳು ಲಭ್ಯ. ಸ್ಥಳೀಯ ಕುಶಲಕರ್ಮಿಗಳ ಜತೆಗೆ ಅನ್ಯ ರಾಜ್ಯಗಳ ಕುಶಲಕರ್ಮಿಗಳೂ ತಮ್ಮ ಕರಕುಶಲ ವಸ್ತುಗಳನ್ನು ಪ್ರಸ್ತುತಪಡಿಸಲು ಮತ್ತು ಮಾರಾಟ ಮಾಡಲು ಈ ಮಾರುಕಟ್ಟೆ ಸಹಕಾರಿಯಾಗಿದೆ. ಅದೇ ರೀತಿ, ಚಿತ್ರಕಲಾ ಪರಿಷತ್ತು ಸಹ ತನ್ನ ಆವರಣದಲ್ಲಿ ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳ ಸಂಗಮಕ್ಕೆ ವೇದಿಕೆ ಕಲ್ಪಿಸುತ್ತಿದೆ.

ಈ ಸಂಬಂಧ 70 ಶಾಶ್ವತ ಮಳಿಗೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ಒಂದು ತಿಂಗಳ ಅವಧಿಯಲ್ಲಿ 40 ಮಳಿಗೆಗಳ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇನ್ನುಳಿದ 30 ಮಳಿಗೆಗಳು ಜನವರಿ ವೇಳೆಗೆ ತಲೆಯೆತ್ತಲಿದ್ದು, ಇಲ್ಲಿಯೇ ದೇಶದ ಎಲ್ಲ ಭಾಗಗಳ ಕಲಾಕೃತಿ  ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವರ್ಷದ ಎಲ್ಲ ದಿನಗಳು ನಡೆಯಲಿದೆ. 

₹3.5 ಕೋಟಿ ವೆಚ್ಚ: ಈ ಮೊದಲು ಪರಿಷತ್ತಿನ ಆವರಣದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವರ್ಷದ ಕೆಲ ದಿನಗಳು ನಡೆದರೂ, ಶಾಶ್ವತ ಮಳಿಗೆಗಳು ಇರದ ಕಾರಣ ಮಳೆ ಬಂದಲ್ಲಿ ಸಮಸ್ಯೆ ಎದುರಾಗುತ್ತಿತ್ತು. ಕಲಾಕೃತಿಗಳು ಹಾಗೂ ಕರಕುಶಲ ವಸ್ತುಗಳ ಸಂರಕ್ಷಣೆ, ದಾಸ್ತಾನು ಸಹ ಕಷ್ಟಸಾಧ್ಯವಾಗಿತ್ತು. ಆದ್ದರಿಂದ ಪರಿಷತ್ತು ಸುಮಾರು ₹3.5 ಕೋಟಿ ವೆಚ್ಚದಲ್ಲಿ ‘ಚಿತ್ತಾರ’ ತೆರೆದ ಮಾರುಕಟ್ಟೆಯನ್ನು ನಿರ್ಮಿಸುತ್ತಿದೆ. ಪ್ರತಿ ಮಳಿಗೆ ನಿರ್ಮಾಣಕ್ಕೂ ₹3 ಲಕ್ಷದಿಂದ ₹5 ಲಕ್ಷ ವೆಚ್ಚ ಮಾಡಲಾಗುತ್ತಿದೆ.

ಈ ಮಳಿಗೆಗಳ ನಿರ್ಮಾಣಕ್ಕೆ ಹಿಂದೆ ಬಿಬಿಎಂಪಿ ನೀಡಿದ್ದ ₹1 ಕೋಟಿಯನ್ನು ಪರಿಷತ್ತು ಬಳಸಿಕೊಳ್ಳುತ್ತಿದ್ದು, ಉಳಿದ ಹಣವನ್ನು ತನ್ನ ಸಂಪನ್ಮೂಲದಿಂದ ಭರಿಸುತ್ತಿದೆ. ಮಳಿಗೆಗಳು ನಿರ್ಮಿಸುತ್ತಿರುವ ಜಾಗದಲ್ಲಿ ಬೃಹತ್ ಕಲ್ಲಿನ ಬಂಡೆಗಳೂ ಇದ್ದು, ಅವುಗಳಿಗೆ ಹಾನಿಯಾಗದಂತೆ ಪ್ರಾಕೃತಿಕ ಸೌಂದರ್ಯ ಕಾಯ್ದುಕೊಳ್ಳಲಾಗಿದೆ. ಈ ಮಳಿಗೆಗಳು ಕಾರ್ಯಾರಂಭಿಸಿದ ಬಳಿಕ ವರ್ಷದ ಎಲ್ಲ ದಿನಗಳು ಕಲಾ ಪ್ರದರ್ಶನ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ವಿವಿಧ ಸಂಸ್ಥೆಗಳಿಗೆ ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲು ಸಿಕೆಪಿ ಆಡಳಿತ ಮಂಡಳಿ ಚಿಂತಿಸಿದೆ.    

ಬಯಲು ರಂಗಮಂದಿರ ನವೀಕರಣ

ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಬಯಲು ರಂಗಮಂದಿರವಿದ್ದು ಈ ಹಿಂದೆ ಅಲ್ಲಿ ರಂಗ ಚಟುವಟಿಕೆಗಳು ನಡೆಯುತ್ತಿದ್ದವು. ನಿರ್ವಹಣೆ ಕೊರತೆ ಹಾಗೂ ತಾತ್ಕಾಲಿಕ ಮಳಿಗೆಗಳು ಅಲ್ಲಿ ತಲೆಯೆ‌ತ್ತಿದ್ದ ಕಾರಣ ಬಯಲು ರಂಗಮಂದಿರ ನಿರುಪಯುಕ್ತವಾಗಿತ್ತು. ಈಗ ಆ ರಂಗಮಂದಿರದ ನವೀಕರಣದ ಕಾಮಗಾರಿಯನ್ನೂ ಚಿತ್ರಕಲಾ ಪರಿಷತ್ತು ಕೈಗೆತ್ತಿಕೊಂಡಿದೆ. ಈ ನವೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿ ರಂಗ ಚಟುವಟಿಕೆ ಸಂಗೀತ–ನೃತ್ಯದಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಲಾಗುತ್ತದೆ. ಇಲ್ಲಿ 200ರಿಂದ 300 ಮಂದಿ ಪ್ರೇಕ್ಷಕರಿಗೆ ಆಸನ ಸಾಧ್ಯ. ಈ ರಂಗ ಮಂದಿರದ ಸುತ್ತಲೂ ಶಾಶ್ವತ ಮಳಿಗೆಗಳು ತಲೆಯೆತ್ತುತ್ತಿರುವುದರಿಂದ ಕರಕುಶಲ ವಸ್ತುಗಳ ಪ್ರದರ್ಶನದ ವೀಕ್ಷಣೆಗೆ ಬಂದವರು ಸಹ ಕಲಾ ಚಟುವಟಿಕೆಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ.  ಸಿಕೆಪಿ ಆವರಣದಲ್ಲಿರುವ ಬಯಲು ರಂಗಮಂದಿರದ ಬಳಿ ಗಾಂಧಿ ಕುಟೀರವಿದ್ದು ಅದನ್ನು ನವೀಕರಣ ಮಾಡಲಾಗಿದೆ. ಇದನ್ನು ಬಾಡಿಗೆಗೆ ನೀಡಲು ಪರಿಷತ್ತು ನಿರ್ಧರಿಸಿದೆ. ಪುಸ್ತಕಗಳ ಬಿಡುಗಡೆ ವಿಚಾರಸಂಕಿರಣದಂತಹ ಕಾರ್ಯಕ್ರಮಗಳಿಗೆ ನೀಡಲಾಗುತ್ತದೆ. 

ವಿವಿಧ ಭಾಗಗಳ ಕಲಾವಿದರಿಗೆ ವೇದಿಕೆ

‘ಚಿತ್ತಾರ’ ಮಳಿಗೆಗಳು ದೇಶದ ವಿವಿಧ ಭಾಗಗಳ ಕಲಾವಿದರಿಗೆ ವೇದಿಕೆ ಕಲ್ಪಿಸಲಿದೆ. ವಿವಿಧ ರಾಜ್ಯಗಳ ಕಲಾವಿದರು ತಾವು ತಯಾರಿಸಿದ ಉತ್ಪನ್ನಗಳನ್ನು ತಂದು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಇದರಿಂದಾಗಿ ಗ್ರಾಹಕರಿಗೂ ಕೈಗೆಟಕುವ ದರದಲ್ಲಿ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು ಲಭ್ಯವಾಗಲಿವೆ. 

ಮಳಿಗೆಯಿಂದ ಸಿಕೆಪಿಗೆ ಆದಾಯ  

ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಒಂದು ಕಲಾ ಸಂಕೀರ್ಣವಾಗಿದೆ. 60ರ ದಶಕದ ಮಧ್ಯಭಾಗದಿಂದ ದೃಶ್ಯ ಕಲೆಗಳ ಪ್ರಮುಖ ಕೇಂದ್ರವಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂ.ಆರ್ಯ ಮೂರ್ತಿ ಅವರು ಇದರ ಸಂಸ್ಥಾಪನಾಧ್ಯಕ್ಷರಾದರೆ ಪ್ರೊ.ಎಂ.ಎಸ್. ನಂಜುಂಡರಾವ್ ಅವರು ಸಂಸ್ಥಾಪನಾ ಕಾರ್ಯದರ್ಶಿಯಾಗಿದ್ದಾರೆ. ಪರಿಷತ್ತಿನ ಆಶ್ರಯದಲ್ಲಿ ಚಿತ್ರಕಲಾ ಮಹಾವಿದ್ಯಾಲಯವೂ ಕಾರ್ಯನಿರ್ವಹಿಸುತ್ತಿದೆ. ಸುಸಜ್ಜಿತ ಗ್ಯಾಲರಿಗಳು ವಸ್ತು ಸಂಗ್ರಹಾಲಯವನ್ನು ಪರಿಷತ್ತು ಒಳಗೊಂಡಿದೆ. ಇದು ಪ್ರತಿ ವರ್ಷ ನಡೆಸುವ ಚಿತ್ರಸಂತೆ ದೇಶದ ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುತ್ತಿದ್ದು ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಈ ಸಂತೆಯು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈಗ ನಿರ್ಮಿಸುತ್ತಿರುವ ಶಾಶ್ವತ ಮಳಿಗೆಗಳಿಗೆ ಪರಿಷತ್ತು ಬಾಡಿಗೆ ನಿಗದಿಪಡಿಸಲಿದ್ದು ಇದರಿಂದ ನಿಗದಿತ ಆದಾಯ ಬರಲಿದೆ. ಇದು ಪರಿಷತ್ತಿನ ನಿರ್ವಹಣೆಗೆ ಸಹಕಾರಿಯಾಗಲಿದೆ. 

ಮಳಿಗೆಗಳು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ. ಇವು ಕುಶಲಕರ್ಮಿಗಳಿಗೆ ಉತ್ತಮ ವೇದಿಕೆಯಾದರೆ ನಗರದ ಜನರಿಗೆ ಒಂದೇ ಸೂರಿನಡಿ ದೇಶದ ವಿವಿಧ ಭಾಗಗಳ ಕರಕುಶಲ ವಸ್ತುಗಳು ದೊರೆಯಲಿವೆ.
-ಬಿ.ಎಲ್. ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ
ಮಳಿಗೆಗಳ 3ಡಿ ವಿನ್ಯಾಸ
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆಗಳ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮಳಿಗೆಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಮಳಿಗೆಗಳು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.