ADVERTISEMENT

ಕ್ರಿಸ್‌ಮಸ್‌ ಹಬ್ಬಕ್ಕೆ ಖರೀದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:05 IST
Last Updated 23 ಡಿಸೆಂಬರ್ 2025, 23:05 IST
ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನ ಮುಂಭಾಗದ ಮಳಿಗೆಯೊಂದರಲ್ಲಿ ಯುವತಿಯೊಬ್ಬರು ಆಲಂಕಾರಿಕ ವಸ್ತುಗಳನ್ನು ಖರೀದಿಸಿದರು
ಪ್ರಜಾವಾಣಿ ಚಿತ್ರಗಳು: ರಂಜು ಪಿ. 
ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನ ಮುಂಭಾಗದ ಮಳಿಗೆಯೊಂದರಲ್ಲಿ ಯುವತಿಯೊಬ್ಬರು ಆಲಂಕಾರಿಕ ವಸ್ತುಗಳನ್ನು ಖರೀದಿಸಿದರು ಪ್ರಜಾವಾಣಿ ಚಿತ್ರಗಳು: ರಂಜು ಪಿ.    

ಬೆಂಗಳೂರು: ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ಕ್ರೈಸ್ತ ಸಮುದಾಯದವರು ಸಜ್ಜಾಗಿದ್ದಾರೆ. ಕ್ರಿಸ್‌ಮಸ್‌ ವೃಕ್ಷಗಳು, ಸ್ನೋಬಾಲ್, ವರ್ಣ ರಂಜಿತ ನಕ್ಷತ್ರ ಸೇರಿದಂತೆ ವಿವಿಧ ಆಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಮೆರುಗು ನೀಡುತ್ತಿದ್ದು, ಖರೀದಿ ಜೋರಾಗಿದೆ. 

ಯೇಸುವಿನ ಜೀವನ ಬಿಂಬಿಸುವ ಗೋದಲಿಯ ಮಾದರಿ, ಬೃಹದಾಕಾರದ ನಕ್ಷತ್ರಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸೆಂಟಾಕ್ಲಾಸ್‌ ಪ್ರತಿರೂಪಗಳು ಗಮನಸೆಳೆಯುತ್ತಿವೆ. ಸೆಂಟಾಕ್ಲಾಸ್‌ನ ಸಿದ್ಧ ಉಡುಪು, ಟೋಪಿಗೆ ಬೇಡಿಕೆ ಹೆಚ್ಚಿದೆ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಯೇಸು, ಮೇರಿಯ ವಿವಿಧ ಭಂಗಿಯ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿವೆ’ ಎಂದು ವ್ಯಾಪಾರಿಗಳು ತಿಳಿಸಿದರು.  

ADVERTISEMENT

‘ಮುಂಬೈ, ಗೋವಾ ಹಾಗೂ ತಮಿಳುನಾಡಿನಿಂದ ಕ್ರಿಸ್‌ಮಸ್‌ ವೃಕ್ಷಗಳು ಬೆಂಗಳೂರಿಗೆ ಪೂರೈಕೆ ಆಗುತ್ತವೆ. ತಯಾರಿಕಾ ಹಾಗೂ ಸಾಗಣೆ ವೆಚ್ಚ ಹೆಚ್ಚಳವಾಗಿದೆ. ಆದ್ದರಿಂದ ಈ ಬಾರಿ ದರ ಹೆಚ್ಚಿಸಲಾಗಿದೆ. ಎರಡು ಅಡಿಯ ಕ್ರಿಸ್‌ಮಸ್‌ ವೃಕ್ಷವೊಂದಕ್ಕೆ ₹500 ಇದ್ದರೆ, 15 ಅಡಿಯ ವೃಕ್ಷವನ್ನು ₹15 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದೆ. ಕೃತಕವಾಗಿ ನಿರ್ಮಿಸಿರುವ ಮನೆಯಲ್ಲಿ ಪುಟಾಣಿ ಯೇಸುವನ್ನು ನೋಡಲು ಬರುವ ಗೊಂಬೆಗಳ ಮಾದರಿಗೆ (ಕ್ರಿಪ್‌) ಹೆಚ್ಚು ಬೇಡಿಕೆ ಇದೆ’ ಎಂದು ಶಿವಾಜಿನಗರ ಮಾರುಕಟ್ಟೆಯ ವ್ಯಾಪಾರಿಗಳಾದ ಥಾಮಸ್‌, ಜಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನ ಮುಂಭಾಗದಲ್ಲಿ 30ಕ್ಕೂ ಹೆಚ್ಚು ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗಿದ್ದು, ಇಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದರು.  

ಚಿಕ್ಕಪೇಟೆ, ಮಹಾತ್ಮ ಗಾಂಧಿ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕ್ರಿಸ್‌ಮಸ್‌ ವೃಕ್ಷ, ನಕ್ಷತ್ರ, ದೀಪಗಳ ಆಲಂಕಾರಕ್ಕಾಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ನಗರದ ವಿವಿಧ ಮಾಲ್‌, ಬಟ್ಟೆ ಹಾಗೂ ಆಭರಣ ಮಳಿಗೆಗಳ ಮುಂಭಾಗದಲ್ಲಿ ಗ್ರಾಹಕರನ್ನು ಸೆಳೆಯಲು ಬೃಹತ್‌ ಕ್ರಿಸ್‌ಮಸ್‌ ವೃಕ್ಷ ಹಾಗೂ ಸಂತಾಕ್ಲಾಸ್‌ ಪ್ರದರ್ಶಿಸಲಾಗಿದೆ.

ಕೇಕ್‌ಗೆ ಹೆಚ್ಚಿದ ಬೇಡಿಕೆ: ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಕೇಕ್‌ ತಯಾರಿಕೆ ಹಾಗೂ ಮಾರಾಟ ಜೋರಾಗಿದೆ. ನಗರದ ವಿವಿಧ ಬೇಕರಿಗಳಲ್ಲಿ ಬಗೆ ಬಗೆಯ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. 

ಸಂತಾಕ್ಲಾಸ್‌ ಬೊಂಬೆಗಳನ್ನು ಕುತೂಹಲದಿಂದ ವೀಕ್ಷಿಸಿದ ಯುವತಿಯರು

ಚರ್ಚ್‌ಗಳಿಗೆ ವಿದ್ಯುತ್ ದೀಪಾಲಂಕಾರ ಐತಿಹಾಸಿಕ ಹಡ್ಸನ್ ಚರ್ಚ್ ರೈಸ್ ಮೆಮೋರಿಯಲ್ ಚರ್ಚ್ ಹೋಲಿ ಟ್ರಿನಿಟಿ ಚರ್ಚ್ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಸೇರಿದಂತೆ ನಗರದ ಎಲ್ಲ ಚರ್ಚ್‌ಗಳು ಕ್ರಿಸ್‌ಮಸ್ ಆಚರಣೆಗೆ ಸಿದ್ಧಗೊಂಡಿವೆ. ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಹಾಗೂ ವಿವಿಧ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.