ADVERTISEMENT

ಬ್ಯಾಂಕ್ ಅವ್ಯವಹಾರ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 8:13 IST
Last Updated 29 ಸೆಪ್ಟೆಂಬರ್ 2020, 8:13 IST
ಗುರು ರಾಘವೇಂದ್ರ ಸಹಕಾರ ಬ್ಯಾಂಕ್
ಗುರು ರಾಘವೇಂದ್ರ ಸಹಕಾರ ಬ್ಯಾಂಕ್   

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

‘ವೆಂಕಟೇಶ್, ಸುಬ್ರಹ್ಮಣ್ಯ ಹಾಗೂ ಬಾಲರೆಡ್ಡಿ ಬಂಧಿತರು. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಸಿಐಡಿ ಪೊಲೀಸರು ಹೇಳಿದರು.

‘ಬ್ಯಾಂಕ್‌ನ ಅಧ್ಯಕ್ಷರ ಸಂಬಂಧಿಯೂ ಆಗಿದ್ದ ವೆಂಕಟೇಶ್, ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದ. ಸುಬ್ರಹ್ಮಣ್ಯ ಮತ್ತು ಬಾಲರೆಡ್ಡಿ ಸಹ ನಾಪತ್ತೆಯಾಗಿದ್ದರು. ರಾಯದುರ್ಗ ಹಾಗೂ ಹಾನಗಲ್‌ನ ವಸತಿಗೃಹದಲ್ಲಿ ಆರೋಪಿಗಳು ಉಳಿದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಪ್ರಕರಣ ಪ್ರಮುಖ ಆರೋಪಿಗಳಾದ ಕೆ. ರಾಮಕೃಷ್ಣ, ಕೆ.ಆರ್. ವೇಣುಗೋಪಾಲ್ ಹಾಗೂ ಜಿ. ರಘುನಾಥ್ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದ್ದು, ಮಾಹಿತಿ ಕೊಟ್ಟವರಿಗೆ ಬಹುಮಾನ ಘೋಷಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.