
ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ ಅವರ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರ ಮೊಬೈಲ್‌ಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೈರತಿ ಅವರನ್ನು ಬಂಧಿಸಿದ್ದರೂ ಅವರ ಮೊಬೈಲ್ ಜಪ್ತಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಿಕ್ಲು ಶಿವು ಅವರ ಕೊಲೆ ನಡೆದಿದ್ದ ಸಂದರ್ಭದಲ್ಲಿ ಆರೋಪಿ ಬಳಸಿದ್ದ ಮೊಬೈಲ್‌ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಹೆಚ್ಚಿನ ವಿಚಾರಣೆಗಾಗಿ ಬೈರತಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಪ್ರಶ್ನೆ ಕೇಳಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಪ್ರಕರಣದ ಮೊದಲ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಹೇಗೆ ಪರಿಚಯ? ಪ್ರಕರಣದ ಇತರೆ ಆರೋಪಿಗಳ ಜತೆಗೆ ನೀವಿರುವ ಹಲವು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ? ಅವರೊಂದಿಗೆ ಹೊರರಾಜ್ಯಕ್ಕೆ ಹೋಗಿದ್ದು ಸತ್ಯವೇ ಎಂಬ ಪ್ರಶ್ನೆ ಕೇಳಲಾಗಿದೆ. ಕೆಲವು ಸಾಕ್ಷ್ಯಾಧಾರಗಳನ್ನೂ ಮುಂದಿಟ್ಟು ಪ್ರಶ್ನೆ ಕೇಳಲಾಗುತ್ತಿದೆ. ಆರೋಪಿ ಬೈರತಿ ಬಸವರಾಜ ಅವರು ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
‘ಜಗ್ಗ ಹಾಗೂ ಬೈರತಿ ಬಸವರಾಜ ಅವರು ಫೋನ್ ಸಂಭಾಷಣೆ ನಡೆಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ವಿಚಾರಣೆ ನಡೆಸಿದಾಗ ಆರೋಪಿ ಕೆಲವು ಸಂಗತಿಗಳನ್ನು ಮರೆಮಾಚಿದ್ದು ಕಂಡುಬಂದಿತ್ತು. ತನಿಖೆ ವೇಳೆ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಸಿಐಡಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.