ADVERTISEMENT

ಬೆಂಗಳೂರು | ‘ಪ್ರಶಸ್ತಿ ವಿಳಂಬ: ಸಿಐಐಎಲ್‌ನಿಂದ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:07 IST
Last Updated 24 ಡಿಸೆಂಬರ್ 2025, 23:07 IST
ಪುರುಷೋತ್ತಮ ಬಿಳಿಮಲೆ 
ಪುರುಷೋತ್ತಮ ಬಿಳಿಮಲೆ    

ಬೆಂಗಳೂರು: ‘ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಸ್ಥಾನವು (ಸಿಐಐಎಲ್) ಕನ್ನಡ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ವಿಳಂಬ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರವು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕಾಗಿ ಪ್ರತಿ ವರ್ಷ ನೀಡಬೇಕಾದ ಪ್ರಶಸ್ತಿಗಳನ್ನು ನಿಯಮಿತವಾಗಿ ನೀಡದೆ, ಕನ್ನಡ ಭಾಷೆಗೆ ನಿರಂತರ ಅನ್ಯಾಯವೆಸಗುತ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಕಳೆದ ವರ್ಷ ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯ ಚರ್ಚಿಸಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರೂ, ಈವರೆಗೂ ಯಾವುದೇ ಫಲಿತಾಂಶ ದೊರಕದಿರುವುದು ಕೇಂದ್ರದ ನಿಷ್ಕ್ರಿಯತೆಗೆ ಉದಾಹರಣೆ’ ಎಂದು ಹೇಳಿದ್ದಾರೆ.

‘2019ರಲ್ಲಿ ಅಧ್ಯಕ್ಷೀಯ, ಮಹರ್ಷಿ ಬಾದರಾಯಣ, ವ್ಯಾಸ ಸಮ್ಮಾನ್‌ ಸೇರಿ ವಿವಿಧ ಪ್ರಶಸ್ತಿಗಳನ್ನು ಸಿಐಐಎಲ್‌ ನೀಡಿದೆ. ಬಳಿಕ ಏಳು ವರ್ಷಗಳು ಕಳೆದರೂ ಪ್ರಶಸ್ತಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಅರ್ಹರಿಲ್ಲ ಎನ್ನುವ ತೀರ್ಮಾನಕ್ಕೆ ಈ ಸಂಸ್ಥೆ ಬಂದಿರಬಹುದೇ ಎನ್ನುವ ಸಂದೇಹ ಸಂಸ್ಥೆ ಮೂಡಿಸುತ್ತಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.