ADVERTISEMENT

ನಿರ್ದಿಷ್ಟ ಧರ್ಮದವರ ಪೌರತ್ವ ನಿರಾಕರಿಸುವ ಹುನ್ನಾರ: ಸಂಜಯ್ ಹೆಗ್ಡೆ ಕಳವಳ

ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 23:20 IST
Last Updated 6 ಸೆಪ್ಟೆಂಬರ್ 2025, 23:20 IST
ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಜಯ್ ಹೆಗ್ಡೆ ಮತ್ತು ತೀಸ್ತಾ ಸೆಟಲ್‌ವಾಡ್‌ ಮಾತುಕತೆಯಲ್ಲಿ ತೊಡಗಿದ್ದರು. ದಿನೇಶ್‌ ಅಮಿನ್ ಮಟ್ಟು, ತಾರಾ ರಾವ್ ಉಪಸ್ಥಿತರಿದ್ದರು
ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಜಯ್ ಹೆಗ್ಡೆ ಮತ್ತು ತೀಸ್ತಾ ಸೆಟಲ್‌ವಾಡ್‌ ಮಾತುಕತೆಯಲ್ಲಿ ತೊಡಗಿದ್ದರು. ದಿನೇಶ್‌ ಅಮಿನ್ ಮಟ್ಟು, ತಾರಾ ರಾವ್ ಉಪಸ್ಥಿತರಿದ್ದರು   

ಬೆಂಗಳೂರು: ‘ದೇಶ ವಿಭಜನೆಯ ಸಂದರ್ಭದಲ್ಲಿ ಈ ನೆಲದಲ್ಲೇ ಉಳಿಯುತ್ತೇವೆ ಎಂದು ಇಲ್ಲೇ ನೆಲೆ ನಿಂತ ಧಾರ್ಮಿಕ ಅಲ್ಪಸಂಖ್ಯಾತರ ಪೌರತ್ವವನ್ನು ನಿರಾಕರಿಸುವ ಹುನ್ನಾರಗಳು ನಡೆಯುತ್ತಿವೆ’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ನಾನು ಗೌರಿ ಸ್ಮಾರಕ ಟ್ರಸ್ಟ್‌ ಶನಿವಾರ ಆಯೋಜಿಸಿದ್ದ, ‘ಅಪಾಯದ ಸುಳಿಯಲ್ಲಿ ಪ್ರಜಾತಂತ್ರ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶ ವಿಭಜನೆಯ ಸಂದರ್ಭದಲ್ಲಿ ಮುಸ್ಲಿಮರನ್ನು ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಕ್ಕೆ ಹೋಗಲು ಹೇಳಲಾಯಿತು. ಆದರೆ ಹಲವರು ಇಲ್ಲೇ ಉಳಿದರು. ಸಂವಿಧಾನವನ್ನು ಅಂಗೀಕರಿಸಿದ ದಿನದಿಂದ 65 ವರ್ಷಗಳವರೆಗೆ ದೇಶವು ಸಮಾನತೆ, ಏಕತೆಯೆಡೆಗೆ ಸಾಗುತ್ತಿತ್ತು. 65 ವರ್ಷಗಳ ನಂತರ ಹಿಮ್ಮುಖವಾಗಿ ಚಲಿಸಲು ಆರಂಭಿಸಿತು’ ಎಂದರು.

ADVERTISEMENT

‘ನಮ್ಮವರು ಎಂದು ಒಪ್ಪಿಕೊಳ್ಳಲಾಗಿದ್ದ, ನಮ್ಮವರೇ ಆಗಿದ್ದ ಒಂದು ಧಾರ್ಮಿಕ ಸಮುದಾಯದ ಜನರ ದೇಶ‍ಪ್ರೇಮವನ್ನು ಮೊದಲು ಪ್ರಶ್ನಿಸಲಾಗುತ್ತಿತ್ತು. ಈಗ ಅವರ ಪೌರತ್ವವನ್ನು ಪ್ರಶ್ನಿಸಲಾಗುತ್ತಿದೆ. ಅದರ ಭಾಗವಾಗಿಯೇ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಚೀಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುತ್ತಿದೆ. ಆಡಳಿತ ಪಕ್ಷಕ್ಕೆ ಮತ ಹಾಕದೇ ಇರುವ ಧರ್ಮ ಮತ್ತು ಜಾತಿ ಸಮುದಾಯಗಳ ಜನರ ಪೌರತ್ವವನ್ನು ರದ್ದುಪಡಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ’ ಎಂದರು.

‘ಮತದಾನದ ಹಕ್ಕು ಕಸಿಯುವ ಯತ್ನ’

‘ಪ್ರತಿ ಚುನಾವಣೆಯಲ್ಲೂ ಬಿಜೆಪಿ ಒಂದು ಹೊಸ ತಂತ್ರ ರೂಪಿಸಿ ಗೆಲ್ಲುತ್ತಿದೆ. 2014ರಲ್ಲಿ ಸಾಮಾಜಿಕ ಜಾಲತಾಣ 2019ರಲ್ಲಿ ಇವಿಎಂ ಮತ್ತು 2024ರಲ್ಲಿ ಎರಡನ್ನೂ ಬಳಸಿಕೊಂಡು ಚುನಾವಣೆ ಗೆದ್ದಿತು. ಈಗ ಮತದಾರರ ಚೀಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಪ್ರಯೋಗಿಸುತ್ತಿದೆ’ ಎಂದು ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಹೇಳಿದರು.

‘ನಾವು ಈ ತಂತ್ರಗಳತ್ತ ಗಮನಹರಿಸಿದ್ದರೆ ಬಿಜೆಪಿ ಹೊಸ ತಂತ್ರ ಬಳಸುತ್ತಿರುತ್ತದೆ. ಪ್ರತಿ ಮತದಾರನ ವಿವರವನ್ನು ಬಿಜೆಪಿ ಸಂಗ್ರಹಿಸಿದೆ. ಯಾರು ತಮಗೆ ಮತ ಹಾಕುತ್ತಾರೆ ಯಾರು ತಮಗೆ ಮತ ನೀಡುವುದಿಲ್ಲ ಎಂಬುದು ಆ ಪಕ್ಷದ ಅಭ್ಯರ್ಥಿಗಳಿಗೆ ಸರಿಯಾಗಿ ಗೊತ್ತಿದೆ. ಅವರಿಗೆ ಮತ ಹಾಕದವರನ್ನು ಮತದಾರರ ಚೀಟಿಯನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.