
ದೇಶವ್ಯಾಪಿ ಮುಷ್ಕರ ಫೆ. 12ಕ್ಕೆ
ವಿಜಯಪುರ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆ ಹಿಂಪಡೆಯುವಂತೆ ಆಗ್ರಹಿಸಿ ಫೆ. 12ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಸಿಐಟಿಯು ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ತಿಳಿಸಿದರು.
‘ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ಯುವಜನ, ವಿದ್ಯಾರ್ಥಿ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ಕಾರ್ಮಿಕರು ಹಾಗೂ ಕಾರ್ಮಿಕರ ಸಂಘಟನೆಗಳ ಅಭಿಪ್ರಾಯ ಪಡೆಯದೇ ಕಾರ್ಮಿಕ ನಿಯಮಗಳನ್ನು ರೂಪಿಸುತ್ತಿದೆ. ಆದ್ದರಿಂದ ಪ್ರಧಾನಿ ಮೋದಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಹೇಳಿದರು.
22ನೇ ಹಸ್ತಪ್ರತಿ ಸಮ್ಮೇಳನ
ಬಾಗಲಕೋಟೆ: ‘ಹಸ್ತಪ್ರತಿಗಳು ನಾಡಿನ ಆಸ್ತಿ. ರಾಜ್ಯ ಸರ್ಕಾರವು ಕಂದಾಯ ವಿಭಾಗ
ಕ್ಕೊಂದು ಹಸ್ತಪ್ರತಿಗಳ ಸಂಗ್ರಹಾಲಯ ತೆರೆಯುವುದರ ಜೊತೆಗೆ ಹಸ್ತಪ್ರತಿ ಅಧ್ಯಯನ ಕೇಂದ್ರ ಆರಂಭಿಸಬೇಕು’ ಎಂದು ಸಾಹಿತಿ ಪ್ರೊ. ಮಲ್ಲೇಪುರಂ ವೆಂಕಟೇಶ ಹೇಳಿದರು.
ಹಂಪಿ ಕನ್ನಡ ವಿ.ವಿ ಹಸ್ತಪ್ರತಿಶಾಸ್ತ್ರ ವಿಭಾಗ ಮತ್ತು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡ ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸರ್ಕಾರವು ಹಸ್ತಪ್ರತಿಯ ಸರ್ವೇಕ್ಷಣೆ, ಸಂಗ್ರಹಣೆ, ಸಂರಕ್ಷಣೆಗೆ ಮುಂದಾಗಬೇಕು’ ಎಂದರು.
‘ಅನುದಾನರಹಿತ ಹಸ್ತಪ್ರತಿ ಭಂಡಾರಗಳಿಗೆ ಸಂಗ್ರಹ, ಸಂರಕ್ಷಣೆ, ಪೋಷಣೆ ಮತ್ತು ಪ್ರಕಟಣೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಬೇಕು’ ಎಂದು ಹೇಳಿದರು.
‘ಪ್ರಾಚೀನ ಹಸ್ತಪ್ರತಿಗಳ ಮೂಲಕ ಜ್ಞಾನ ಪರಂಪರೆ ಅರಿಯಬಹುದು ಮತ್ತು ಸಂರಕ್ಷಿಸಬಹುದು. ಈಗಿನ ಕಾಲದ ಶ್ರೇಷ್ಠ ಕವಿಗಳು ಮತ್ತು ವಿದ್ವಾಂಸರ ಪ್ರಾತಿನಿಧಿಕ ಬರಹಗಳನ್ನೂ ಆ ಸಂಗ್ರಹಾಲಯಗಳು ಒಳಗೊಂಡಿರಬೇಕು’ ಎಂದರು.
ಶಿವಮೊಗ್ಗ: ಇಲ್ಲಿನ ಕರ್ನಾಟಕ ಸಂಘದಿಂದ 2025ನೇ ಸಾಲಿನ ‘ಪುಸ್ತಕ ಬಹುಮಾನ’ಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ.
2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕಾದಂಬರಿ, ಅನುವಾದ, ಮಹಿಳಾ ಸಾಹಿತ್ಯ, ಅಂಕಣ ಬರಹ, ನಾಟಕ, ಪ್ರವಾಸ ಸಾಹಿತ್ಯ, ಕವನ ಸಂಕಲನ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಕೃತಿಗಳನ್ನು ಕಳುಹಿಸಬಹುದು.
ಬಹುಮಾನಕ್ಕೆ ಕಳುಹಿಸುವ ಕೃತಿಗಳು ಮರು ಮುದ್ರಣ ಆಗಿರಬಾರದು. ಹಸ್ತಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಬಹುಮಾನಕ್ಕೆ ಒಟ್ಟು 4 ಪುಸ್ತಕ ಕಳುಹಿಸಬೇಕು. ಕೃತಿ ಕಳುಹಿಸಲು ಮಾರ್ಚ್ 31 ಕಡೆಯ ದಿನ.
ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಸಲ್ಲಿಸಬೇಕು. ಆಯ್ಕೆಯಾದ ಕೃತಿಗಳಿಗೆ ₹10,000 ನಗದು ಬಹುಮಾನವಿದೆ. ಮಾಹಿತಿಗೆ 9980159696 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.