
ಬೆಳ್ಳಂದೂರು ಕೆರೆ
ಬೆಂಗಳೂರು: ಬೆಳ್ಳಂದೂರು ಕೆರೆಗೆ ಸಂಸ್ಕರಣೆಯಾಗದೆ ನೇರವಾಗಿ ತ್ಯಾಜ್ಯ ಜಲ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಂಡ ವಿಧಿಸಿದ್ದು, ಈ ವರ್ಷಾಂತ್ಯದೊಳಗೆ ಎಸ್‌ಟಿಪಿ ನಿರ್ಮಿಸಬೇಕಿದ್ದರೂ ವಿಳಂಬ ಆಗುತ್ತಿರುವುದಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜೌಗು ಭೂಮಿ ಪ್ರಾಧಿಕಾರದ ಅನೌಪಚಾರಿಕ ಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಈ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ಕಾಮಗಾರಿ ತ್ವರಿತಗೊಳಿಸುವಂತೆ ತಿಳಿಸಲು ಸೂಚಿಸಿದರು.
‘ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಲಿದ್ದು, ಜಲಮೂಲಗಳನ್ನು ಮತ್ತು ಕೆರೆ, ಕಟ್ಟೆಗಳನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯ ಇದೆ. ನೇರವಾಗಿ ಸಂಸ್ಕರಣೆ ಮಾಡದೆ ತ್ಯಾಜ್ಯ ಹರಿಸುತ್ತಿರುವುದರಿಂದ ಕೆರೆಗಳ ನೀರು ಕಲುಷಿತವಾಗಿ ನೊರೆ ಹೊರಹೊಮ್ಮುವ ಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲವೂ ಕಲುಷಿತವಾಗುತ್ತಿದೆ. ಈ ಪ್ರಕರಣವನ್ನು ಎನ್‌ಜಿಟಿ ಗಂಭೀರವಾಗಿ ಪರಿಗಣಿಸಿ, ದಂಡ ವಿಧಿಸಿದ್ದರೂ ಸಂಸ್ಕರಣಾ ಘಟಕ ನಿರ್ಮಾಣದಲ್ಲಿ ವಿಳಂಬ ಆಗುತ್ತಿರುವುದು ಸರಿಯಲ್ಲ’ ಎಂದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.