ADVERTISEMENT

ಲಾಕ್‌ಡೌನ್‌: ಲಾಠಿ ಕೆಳಗಿಳಿಸಿ ಕರ್ತವ್ಯ ನಿರ್ವಹಿಸಿದ ಪೊಲೀಸರು

ಅನಗತ್ಯ ಸಂಚರಿಸುವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಮೇ 2021, 21:33 IST
Last Updated 11 ಮೇ 2021, 21:33 IST
ಅಮೃತನಗರದಲ್ಲಿ ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ಮಂಗಳವಾರ ತಪಾಸಣೆ ನಡೆಸಿದರು – ಪ್ರಜಾವಾಣಿ ಚಿತ್ರ
ಅಮೃತನಗರದಲ್ಲಿ ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ಮಂಗಳವಾರ ತಪಾಸಣೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ನ ಎರಡನೇ ದಿನವಾದ ಮಂಗಳವಾರ ಪೊಲೀಸರು ಲಾಠಿ ಕೆಳಗಿಳಿಸಿ ಕರ್ತವ್ಯ ನಿರ್ವಹಿಸಿದರು. ಅನಗತ್ಯವಾಗಿ ಓಡಾಡಿದವರ ವಿರುದ್ಧ ಪ್ರಕರಣಗಳೂ ದಾಖಲಾದವು.

ಕೆ.ಆರ್. ಮಾರುಕಟ್ಟೆ, ಎಸ್‌.ಪಿ. ರಸ್ತೆ, ಯಶವಂತಪುರ, ಮಲ್ಲೇಶ್ವರ, ವೈಟ್‌ಫೀಲ್ಡ್, ಬೆಳ್ಳಂದೂರು, ಚಾಮರಾಜಪೇಟೆ, ಶಿವಾಜಿನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ವ್ಯಾಪಾರ ಜೋರಾಗಿತ್ತು. 10 ಗಂಟೆ ನಂತರ ಬಹುತೇಕ ಕಡೆ ಅಂಗಡಿಗಳನ್ನು ಬಂದ್ ಮಾಡಲಾಯಿತು.

ಶಿವಾಜಿನಗರ ಹಾಗೂ ಚಾಮರಾಜಪೇಟೆಗಳಲ್ಲಿ ಹಲವು ಅಂಗಡಿಗಳು ಬಾಗಿಲು ಮುಚ್ಚಿರಲಿಲ್ಲ. ಸ್ಥಳಕ್ಕೆ ಹೋಗಿದ್ದ ಕೆಲವೇ ಪೊಲೀಸರಿಗೆ ಅಂಗಡಿಗಳನ್ನು ಬಂದ್ ಮಾಡಿಸಲು ಆಗಲಿಲ್ಲ. ಹೀಗಾಗಿ, ಮಧ್ಯಾಹ್ನದವರೆಗೂ ಬಟ್ಟೆ, ಮಾಂಸ, ಹಣ್ಣು, ತರಕಾರಿ ಅಂಗಡಿಗಳು ತೆರೆದಿದ್ದವು.

ADVERTISEMENT

ಕೆ.ಆರ್. ಮಾರುಕಟ್ಟೆ ಹಾಗೂ ಯಶವಂತಪುರದಲ್ಲಿ ಅಗತ್ಯ ವಸ್ತುಗಳ ಮಾರಾಟದ ವ್ಯಾಪಾರಿಗಳು ಹೆಚ್ಚಿದ್ದರು. ಆದರೆ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಬಹುತೇಕ ಗ್ರಾಹಕರು, ವಾಹನಗಳಲ್ಲಿ ಬಂದು ವಸ್ತುಗಳನ್ನು ಖರೀದಿಸಿಕೊಂಡು ಹೋದರು. ರಸ್ತೆಯ ಅಕ್ಕ–ಪಕ್ಕದಲ್ಲಿ ತಳ್ಳುಗಾಡಿ ನಿಲ್ಲಿಸಿದ್ದವರನ್ನು ಪೊಲೀಸರು ಚದುರಿಸಿ ಬೇರೆಡೆ ಕಳುಹಿಸಿದರು.

ವಾಹನಗಳ ತಪಾಸಣೆ: ನಗರದಲ್ಲಿ ಭದ್ರತೆ ಹಾಗೂ ವಾಹನಗಳ ತಪಾಸಣೆಗಾಗಿ ಚೆಕ್‌ಪೋಸ್ಟ್‌ಗಳಲ್ಲಿ ನಿರ್ಮಿಸಲಾಗಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದಲೇ ವಾಹನಗಳ ತಪಾಸಣೆ ನಡೆಸಲಾಯಿತು.

ಪ್ರತಿಯೊಂದು ವಾಹನಗಳನ್ನು ತಡೆದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ದಾಖಲೆ ಸರಿ ಇಲ್ಲದ ಹಾಗೂ ಸೂಕ್ತ ಕಾರಣ ನೀಡದವರ ವಾಹನಗಳನ್ನು ಜಪ್ತಿ ಮಾಡಿದರು. ಕೆಲ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ಅಗತ್ಯ ವಸ್ತುಗಳ ಖರೀದಿ, ತುರ್ತು ವೈದ್ಯಕೀಯ ಸೇವೆ, ಹೋಟೆಲ್ ಪಾರ್ಸೆಲ್ ಸೇರಿದಂತೆ ಹಲವು ಕಾರಣ ನೀಡಿ ಜನರು ಪೊಲೀಸರಿಂದ ತಪ್ಪಿಸಿಕೊಂಡು ಹೋದರು.

‘ಪೊಲೀಸರು ಲಾಠಿಯಿಂದ ಹೊಡೆಯುತ್ತಿದ್ದಾರೆ’ ಎಂಬ ಆರೋಪಗಳು ಬಂದಿದ್ದರಿಂದ ಕಮಿಷನರ್ ಕಮಲ್ ಪಂತ್ ಅವರೇ ಮಂಗಳವಾರ ರಸ್ತೆಗೆ ಇಳಿದಿದ್ದರು. ಕೆ.ಆರ್. ಮಾರುಕಟ್ಟೆ ಬಳಿ ಪೊಲೀಸರ ಜೊತೆ ಸೇರಿ ವಾಹನಗಳನ್ನು ತಡೆದು ಪರಿಶೀಲನೆ ನಡೆಸಿದರು. ಆಯಾ ವಿಭಾಗಗಳಲ್ಲಿ ಡಿಸಿಪಿಗಳು ಸಂಚರಿಸಿ ಭದ್ರತೆ ಪರಿಶೀಲನೆ ನಡೆಸಿದರು.

ಬೈಕ್‌ನಲ್ಲಿ ಹೊರಟಿದ್ದ ವ್ಯಕ್ತಿಯೊಬ್ಬ ರಸ್ತೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ. ಆತನನ್ನು ತಡೆದ ಕಮಲ್ ಪಂತ್, ವಿಚಾರಣೆ ನಡೆಸಿದರು. ‘ನಾನು ಪತ್ರಕರ್ತ’ ಎಂದು ಆತ ಹೇಳಿದ್ದ. ಯಾವ ಮಾಧ್ಯಮ ? ಎಂದಾಗ ಹೇಳಲು ತಡವರಿಸಿದ. ಆತನ ಬೈಕ್ ಜಪ್ತಿ ಮಾಡುವಂತೆ ಕಮಿಷನರ್, ಪೊಲೀಸರಿಗೆ ಸೂಚಿಸಿದರು.

ಕೆ.ಆರ್. ಮಾರುಕಟ್ಟೆ ಬಳಿ ಅನಗತ್ಯವಾಗಿ ಸಂಚರಿಸುತ್ತಿದ್ದ ಆಟೊ ಚಾಲಕನನ್ನು ತಡೆದಿದ್ದ ಪೊಲೀಸರು, ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿ ಕಳುಹಿಸಿದರು.

ಅಂತರ ಮರೆತ ಜನ
‘ಶಿವಾಜಿನಗರ, ಮಲ್ಲೇಶ್ವರ, ರಾಜಾಜಿನಗರ, ವಿಜಯನಗರ ಹಾಗೂ ಕೆಲ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲೇ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲೆಲ್ಲ ಅಂತರ ಮರೆತು ಜನ ಖರೀದಿಯಲ್ಲಿ ಮಗ್ನರಾಗಿದ್ದರು.

‘ಸೋಮವಾರವೂ ಮಳಿಗೆಗಳು ತೆರೆದಿದ್ದವು. ಲಾಠಿ ಏಟು ಬೀಳುವ ಭಯದಲ್ಲಿ ಅಂತರ ಕಾಯ್ದುಕೊಂಡಿದ್ದರು. ಆದರೆ, ಮಂಗಳವಾರ ಪೊಲೀಸರು ಅಂಗಡಿಗಳ ಬಳಿಯೂ ಬರಲಿಲ್ಲ. ಇದು ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಯಿತು’ ಎಂದು ಶಿವಾಜಿನಗರ ನಿವಾಸಿಯೊಬ್ಬರು ಹೇಳಿದರು.

ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು
ಪ್ರತಿ ಚೆಕ್‌ಪೋಸ್ಟ್‌ನಲ್ಲೂ ಪೊಲೀಸರು ಕಾವಲು ಕಾಯುತ್ತಿದ್ದರು. ಸೋಮವಾರಕ್ಕಿಂತಲೂ ಮಂಗಳವಾರ ನಗರದಲ್ಲಿ ಪೊಲೀಸರ ಸಂಖ್ಯೆ ಕಡಿಮೆ ಇತ್ತು.

‘ಜನರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಕಾನೂನು ಪಾಲಿಸುತ್ತಿಲ್ಲ. ಅಂಥವರಿಗೆ ಲಾಠಿಯಿಂದ ಹೊಡೆದರೆ ಪೊಲೀಸರ ಬಗ್ಗೆಯೇ ಅಪಪ್ರಚಾರ ಮಾಡಲಾಯಿತು. ಜನರಿಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ ನೊಂದಿದ್ದಾರೆ’ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಯಾರ ಮೇಲೆಯೇ ಲಾಠಿ ಪ್ರಹಾರ ಮಾಡಬೇಡಿ ಎಂದು ಸೂಚನೆ ನೀಡಲಾಗಿತ್ತು. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣವನ್ನಷ್ಟೇ ದಾಖಲಿಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.