ADVERTISEMENT

ಕಾಂಗ್ರೆಸ್ ತರಬೇತಿ ಶಿಬಿರದಲ್ಲಿ ಮಾರಾಮಾರಿ: ಇಬ್ಬರು ಮಹಿಳೆಯರಿಗೆ ಗಾಯ

ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 21:05 IST
Last Updated 9 ನವೆಂಬರ್ 2022, 21:05 IST
ಗಾಯಗೊಂಡ ಮಹಿಳೆ ಭಾರತಿ ಮತ್ತು ಗೀತಮ್ಮ
ಗಾಯಗೊಂಡ ಮಹಿಳೆ ಭಾರತಿ ಮತ್ತು ಗೀತಮ್ಮ   

ಪೀಣ್ಯ ದಾಸರಹಳ್ಳಿ: ಕಾಂಗ್ರೆಸ್ ವಿಜಯ್ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದು, ಇಬ್ಬರು ಮಹಿಳೆಯರು ಸೇರಿದಂತೆ ಐದಾರು ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದಲ್ಲದೆ ಪ್ರಕರಣ ಪೀಣ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪೀಣ್ಯ ಎನ್ ಟಿಟಿಎಫ್ ಸರ್ಕಲ್ ಬಳಿ ಇರುವ ಜಿಮ್‌ಖಾನ ಕ್ಲಬ್‌ನಲ್ಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ತಳಮಟ್ಟದ ನಾಯಕತ್ವವನ್ನು ರೂಪಿಸಲು ಸಂಪನ್ಮೂಲ ಅಭಿವರ್ಧಕರ ಮೂರು ದಿನಗಳ ತರಬೇತಿ ಕಾರ್ಯಕ್ರಮ ದಾಸರಹಳ್ಳಿ ಕಾಂಗ್ರೆಸ್ ಉಸ್ತುವಾರಿ ಡಾ.ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ಯೋಜನೆಗೊಂಡಿತ್ತು.

ತರಬೇತಿ ಸಭಾಂಗಣಕ್ಕೆ ಕೆಪಿಸಿಸಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಬೆಂಬಲಿ ಗರೆನ್ನಲಾದ ಸುಮಾರು 20 ಜನರಿದ್ದ ಗುಂಪು ನುಗ್ಗಿತು. ಕ್ಷೇತ್ರದ ಹಿಂದಿನ ಚುನಾವಣೆ ಅಭ್ಯರ್ಥಿಯಾಗಿರುವ ಕೃಷ್ಣಮೂರ್ತಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಮಾಡಿತು. ಈ ಸಂದರ್ಭದಲ್ಲಿ ನಾಗಲಕ್ಷ್ಮಿ ಹಾಗೂ ಕೃಷ್ಣಮೂರ್ತಿ ಅವರ ಗುಂಪುಗಳ ನಡುವೆ ಮಾರಾಮಾರಿ ನಡೆದು ಹಲವರು ಗಾಯಗೊಂಡರು.

ADVERTISEMENT

ಭಾರತಿ ಎಂಬುವರಿಗೆ ಕೃಷ್ಣಮೂರ್ತಿ ಹಿಂಬಾಲಕರು ಕೈ ತಿರುಚಿ ಬೂಟು ಗಾಲಿನಿಂದ ಹೊಟ್ಟೆಗೆ ಒದ್ದ ಪರಿಣಾಮ ಹೊಟ್ಟೆನೋವು ಕಾಣಿಸಿಕೊಂಡು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್ ಮಾಡಿಸಲಾಗಿ ಪೆಟ್ಟು ಬಿದ್ದಿರುವುದಾಗಿ ತಿಳಿದುಬಂದಿದೆ. ಗೀತಾ ಎಂಬಾಕೆಯ ಕಾಲು ಬೆರಳು ಗಳನ್ನು ಜಜ್ಜಲಾಗಿದೆ. ರಮೇಶ್ ಎಂಬುವವರು ಗಾಯಗೊಂಡಿದ್ದಾರೆ.
ಕೆ.ಸಿ.ಅಶೋಕ್, ನಾಗಭೂಷಣ್, ನಾಗಲಕ್ಷ್ಮಿ, ಎಬಿಬಿ ಮಂಜುನಾಥ್, ರವಿಕುಮಾರ್, ಬಿ.ಎಂ. ಜಗದೀಶ್ ಸೇರಿ ಅನೇಕ ಸ್ಥಳೀಯ ಮುಖಂಡರು ಮೂಕವಿಸ್ಮಿತರಾಗಿ ಗಲಭೆಯನ್ನು ನೋಡುತ್ತಿದ್ದರು.

ಗಲಭೆ ನಂತರ ಕಾರ್ಯಕ್ರಮಕ್ಕೆ ಬಂದ ಪಿ.ಎನ್. ಕೃಷ್ಣಮೂರ್ತಿ, ಕೆಲ ನಿಮಿಷ ಕುಳಿತರು. ಆಮೇಲೆ ತರಬೇತಿ ನಡುವೆಯೇ ಹೊರಹೋಗಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರ ಸೂಚನೆ ಮೇರೆಗೆ ಮುಖಂಡೆ ನಾಗಲಕ್ಷ್ಮಿ ಹಾಗೂ ಇತರರು ಠಾಣೆಗೆ ತೆರಳಿ ಸಹ ದೂರು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.