ADVERTISEMENT

ಕ್ಲ್ಯಾಟ್‌ ಪರೀಕ್ಷೆ: ಗುರು–ಶಿಷ್ಯರಿಗೆ ಟಾಪ್‌ ರ್‍ಯಾಂಕ್‌!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 20:45 IST
Last Updated 12 ಡಿಸೆಂಬರ್ 2023, 20:45 IST
   

ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್ ಲಾ ಅಡ್ಮಿಷನ್ ಟೆಸ್ಟ್) –ಕ್ಲ್ಯಾಟ್‌ ಪರೀಕ್ಷೆಯಲ್ಲಿ ಗುರು ಶಿಷ್ಯರಿಬ್ಬರೂ ಟಾಪ್‌ ರ್‍ಯಾಂಕ್‌ ಪಡೆದಿದ್ದಾರೆ.

ಭಾನುವಾರ ಪ್ರಕಟಗೊಂಡ ಪರೀಕ್ಷೆಯ ಫಲಿತಾಂಶದಲ್ಲಿ ಬೆಂಗಳೂರಿನ ಮಲ್ಯ ಆದಿತಿ ಅಂತರರಾಷ್ಟ್ರೀಯ ಶಾಲೆಯಲ್ಲಿ 12 ತರಗತಿಯಲ್ಲಿ ಓದುತ್ತಿರುವ ಪ್ರದ್ಯುತ್‌ ಶಾ ಅಖಿಲ ಭಾರತ ಮಟ್ಟದ ರ್‍ಯಾಂಕ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇಂದಿರಾ ನಗರದ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರದ್ಯುತ್‌ ಅವರಿಗೆ ತರಬೇತಿ ನೀಡುತ್ತಿದ್ದ ಶಿಕ್ಷಕ ರಾಹುಲ್ ಫಲಕುರ್ತಿ ತೃತೀಯ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.

ದೇಶದ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಡಿ. 3ರಂದು ಕ್ಲ್ಯಾಟ್‌ ಪರೀಕ್ಷೆ ನಡೆದಿತ್ತು. ಇದರಲ್ಲಿ ಗುರು–ಶಿಷ್ಯರಿಬ್ಬರೂ ಒಂದೇ ಅಂಕಗಳನ್ನು ಪಡೆದಿದ್ದು, ಉತ್ತಮ ಪ್ರಗತಿ ಆಧಾರದಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದೆ. 

ADVERTISEMENT

‘ಕರಿಯರ್‌ ಲಾಂಚರ್‌ ಸಂಸ್ಥೆಯು ಕ್ಲ್ಯಾಟ್‌ ಪರೀಕ್ಷೆಗಾಗಿ ವಿಶೇಷ ತರಬೇತಿ ನೀಡುತ್ತದೆ. ನಾನು ಮೂರನೇ ಪ್ರಯತ್ನದಲ್ಲಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದೇನೆ. ನಮ್ಮ ಸಂಸ್ಥೆಯಲ್ಲಿ ಕಲಿತ ಪ್ರದ್ಯುತ್‌ ಶಾ ನನಗಿಂತ ಉತ್ತಮ ರ್‍ಯಾಂಕ್‌ ಪಡೆದಿರುವುದು ಬಹಳ ಖುಷಿ ನೀಡಿದೆ’ ಎಂದು ಇಂದಿರಾನಗರದಲ್ಲಿರುವ ಕರಿಯರ್‌ ಲಾಂಚರ್‌ ಸಂಸ್ಥೆಯ ಶಿಕ್ಷಕ ರಾಹುಲ್ ಫಲಕುರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇ 35ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಆದ್ದರಿಂದ, ಸ್ಥಳೀಯ ಅಭ್ಯರ್ಥಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು’ ಎಂದರು.

‘ನಮ್ಮ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಉದ್ದೇಶದಿಂದ ಪರೀಕ್ಷೆ ಬರೆದು ಉತ್ತಮ ರ್‍ಯಾಂಕ್‌ ಪಡೆದುಕೊಂಡಿದ್ದೇನೆ.

-ರಾಹುಲ್‌ ಫಲಕುರ್ತಿ 3ನೇ ರ್‍ಯಾಂಕ್ ಪಡೆದ ಅಭ್ಯರ್ಥಿ

ಕ್ಲ್ಯಾಟ್‌ ಪರೀಕ್ಷೆಯಲ್ಲಿ ವಿಶೇಷ ಕಾರ್ಯತಂತ್ರ ರೂಪಿಸಿ ತಯಾರಿ ನಡೆಸಿದ್ದೆ ನನಗೆ ತರಬೇತಿ ನೀಡಿದ ರಾಹುಲ್ ಸರ್‌ಗಿಂತ ಉತ್ತಮ ರ್‍ಯಾಂಕ್‌ ಪಡೆದಿರುವುದಕ್ಕೆ ಖುಷಿ ನೀಡಿದೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸೀಟ್‌ ಸಿಗುವ ಭರವಸೆ ಇದೆ.

-ಪ್ರದ್ಯುತ್‌ ಶಾ 2ನೇ ರ್‍ಯಾಂಕ್‌ ಪಡೆದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.