
ಜಿಬಿಎ
ಬೆಂಗಳೂರು: ಉತ್ತಮವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸಿದ್ದಕ್ಕಾಗಿ ಜಿಬಿಎ ವತಿಯಿಂದ ನಡೆಸಿದ ತಪಾಸಣೆಯಲ್ಲಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರವು ಮೊದಲ ಸ್ಥಾನ ಪಡೆದಿದ್ದು, ₹1 ಲಕ್ಷ ಬಹುಮಾನ ಪಡೆದಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವು ಎರಡನೇ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರವು ಮೂರನೇ ಸ್ಥಾನ ಪಡೆದಿದ್ದು, ಕ್ರಮವಾಗಿ ₹ 50 ಸಾವಿರ ಮತ್ತು ₹ 25 ಸಾವಿರ ನಗದು ಬಹುಮಾನ ಪಡೆದವು.
ನಗರ ಪಾಲಿಕೆ ಅಧಿಕಾರಿಗಳನ್ನು ಗುರುತಿಸಿ ಉತ್ತೇಜಿಸಲು ಹಾಗೂ ಉತ್ತಮವಾಗಿ ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವವರಿಗೆ ಬಹುಮಾನ ನೀಡುವ ಯೋಜನೆ ಇದಾಗಿತ್ತು. ಮುಖ್ಯ ಎಂಜಿನಿಯರ್‌ಗಳಾದ ರಂಗನಾಥ್ ಮತ್ತು ಯಮುನಾ ಅವರ ನೇತೃತ್ವದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಂಘ-ಸಂಸ್ಥೆಗಳ ಮೂಲಕ ರಸ್ತೆಗಳ ಸ್ವಚ್ಛತೆಯ ಗುಣಮಟ್ಟ ಹಾಗೂ ತ್ಯಾಜ್ಯ ಸಂಗ್ರಹಣೆಯ ಆಧಾರದ ಮೇಲೆ ತಪಾಸಣೆ ಮಾಡಿ, ವಿಜೇತರನ್ನು ಆಯ್ಕೆ ಮಾಡಿದ್ದಾರೆ.
ಇದಲ್ಲದೇ ವಿಭಾಗವಾರು ಪ್ರತ್ಯೇಕ ಸಮಾಧಾನಕರ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಬಹುಮಾನ ವಿತರಿಸಿದರು.
‘ನಗರದ ಸ್ವಚ್ಛತೆಯನ್ನು ಕಾಪಾಡಲು ಪಾಲಿಕೆಯ ಸಿಬ್ಬಂದಿ ಪ್ರತಿದಿನ ಶ್ರಮಿಸುತ್ತಿದ್ದಾರೆ. ಪ್ರತಿ ಶುಕ್ರವಾರ ‘ಫೋನ್ ಇನ್’ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಅಮರೇಶ್ ಎಚ್., ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಎಂಜಿನಿಯರ್‌ಗಳಾದ ರಂಗನಾಥ್, ಯಮುನಾ, ಉಪ ಆಯುಕ್ತರಾದ ಮಂಗಳ ಗೌರಿ, ಪ್ರಕಾಶ್, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಘನ ತ್ಯಾಜ್ಯ ವಿಭಾಗದ ಎಂಜಿನಿಯರ್, ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.
ಖಾಲಿ ನಿವೇಶನದಲ್ಲಿ ತ್ಯಾಜ್ಯ ತೆರವು: ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯ, ಬ್ಲ್ಯಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ, ಆಸ್ತಿ ಮಾಲೀಕರಿಗೆ ದಂಡ ವಿಧಿಸಲು ಅಥವಾ ಅದಕ್ಕೆ ತಗಲುವ ವೆಚ್ಚವನ್ನು ನಿವೇಶನದ ಆಸ್ತಿ ತೆರಿಗೆಯಲ್ಲಿ ಸೇರಿಸಿ ವಸೂಲಿ ಮಾಡಲು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚಿಸಿದರು.
ಯಲಹಂಕ ವಿಮಾನನಿಲ್ದಾಣ ರಸ್ತೆ ಸುತ್ತಮುತ್ತಲಲ್ಲಿ ಸೋಮವಾರ ತಪಾಸಣೆ ಮಾಡಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.