ಬೆಂಳೂರು: ಸ್ವಚ್ಛ, ಹಸಿರು ಬೆಂಗಳೂರಿಗಾಗಿ ‘ಸ್ವಚ್ಛತಾ ಪ್ರತಿಜ್ಞೆ’ ಮಾಡಲು ನಗರದ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ.
‘ಬೆಂಗಳೂರನ್ನು ಭಾರತದ ಸ್ವಚ್ಛ ನಗರವನ್ನಾಗಿ ಮಾಡೋಣ, ಅದಕ್ಕೆ ನಾವೆಲ್ಲರೂ ಪಣ ತೊಡೋಣ’ ಎಂದು ನಾಗರಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲಿಕೆಯ ಜೊತೆ ಕೈಜೋಡಿಸಬಹುದು. ಅಕ್ಟೋಬರ್ 1ರೊಳಗೆ ವೆಬ್‌ಲಿಂಕ್ https://cleanblr.bbmp.gov.in/eng/pledge.php ಮೂಲಕ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಬಹುದು.
ಪ್ರತಿಜ್ಞೆ ಸ್ವೀಕರಿಸುವ ಪ್ರತಿಯೊಬ್ಬರಿಗೂ ‘ಡಿಜಿಟಲ್ ಪ್ರಮಾಣಪತ್ರ’ ನೀಡಲಾಗುವುದು. ಅತಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಶಾಲೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪ್ರಶಸ್ತಿ ನೀಡಲಿದ್ದಾರೆ. ಅಲ್ಲದೆ ಐವರು ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಭಾಷಣ ಸ್ಪರ್ಧೆ: ಮಹಾತ್ಮ ಗಾಂಧಿಯವರ 155ನೇ ಜನ್ಮದಿನಾಚರಣೆಯ ಗೌರವಾರ್ಥವಾಗಿ ಬಿಬಿಎಂಪಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಬಿಬಿಎಂಪಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು https://cleanblr.bbmp.gov.in/eng/index.php ಮೂಲಕ ಸೆ.28ರೊಳಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
6ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳು ‘ಹಸಿರು ಸ್ಥಳಗಳು ಮತ್ತು ನಗರ ಸ್ವಚ್ಛತೆಯಲ್ಲಿ ಅವುಗಳ ಪಾತ್ರ’ ಹಾಗೂ 9ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ‘ನಮ್ಮ ನಗರವನ್ನು ಪರಿವರ್ತನೆಗೊಳಿಸುವಲ್ಲಿ, ಸ್ವಚ್ಛ ಮತ್ತು ಹಸಿರಾಗಿಸುವಲ್ಲಿ ಯುವಜನರ ಶಕ್ತಿ’ ವಿಷಯವಾಗಿ ಭಾಷಣ ಮಾಡಬಹುದು ಎಂದು ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.