ಬೆಂಗಳೂರು: ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯ ಬೊಮ್ಮನಹಳ್ಳಿ ಮೆಟ್ರೊ ನಿಲ್ದಾಣದಿಂದ ಹೊಂಗಸಂದ್ರ ಮೆಟ್ರೊ ನಿಲ್ದಾಣದವರೆಗೆ ಪಾದಾಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿದರು.
ಒತ್ತುವರಿ ಮಾಡಿರುವ ಕಟ್ಟಡ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನೋಟಿಸ್ ಜಾರಿಗೊಳಿಸಬೇಕು. ಜೊತೆಗೆ ದಂಡ ವಿಧಿಸಬೇಕು ಎಂದು ಸೂಚಿಸಿದರು.
ವಿಜಯಲಕ್ಷ್ಮಿ ಟಿಂಬರ್ಸ್ ಹತ್ತಿರದ ಬೆಸ್ಕಾಂ ವಿದ್ಯುತ್ ಪರಿವರ್ತಕಕ್ಕೆ ಹಾಗೂ ಗೋಡೆಗೆ ಅನಧಿಕೃತವಾಗಿ ಭಿತ್ತಿ ಪತ್ರಗಳನ್ನು ಅಂಟಿಸಲಾಗಿದ್ದು ಅವುಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು. ಪಾದಚಾರಿ ಮಾರ್ಗದಲ್ಲಿ ಜೆಸಿಬಿ ಹಾಗೂ ವಾಹನ ನಿಲುಗಡೆ ಮಾಡಿರುವುದನ್ನು ಕಂಡ ಮುಖ್ಯ ಆಯುಕ್ತರು ನೋಟಿಸ್ ನೀಡಿ ದಂಡ ವಿಧಿಸುವಂತೆ ತಿಳಿಸಿದರು.
ರಸ್ತೆಯಲ್ಲಿ ನೀರು ನಿಂತರೆ ರಸ್ತೆ ಹಾಳಾಗುತ್ತವೆ. ವಾಹನ ಸಂಚಾರಕ್ಕೆ ತೊಡಕಾಗುತ್ತದೆ. ಪಾದಚಾರಿ ಮಾರ್ಗದಲ್ಲಿ ನೀರು ನಿಂತರೆ ಡೆಂಗಿ ಹರಡುವ ಸಾಧ್ಯತೆ ಇರುತ್ತದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಕಟ್ಟಡ ತ್ಯಾಜ್ಯವನ್ನು ತಂದು ರಸ್ತೆ ಬದಿಯಲ್ಲಿ ಸುರಿಯುವವರಿಗೆ ದಂಡ ವಿಧಿಸಬೇಕು ಎಂದು ಹೇಳಿದರು.
ಆಕ್ಸ್‌ಫರ್ಡ್ ಎಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ದೊಡ್ಡಮೋರಿಯ ದುರ್ವಾಸನೆಯಿಂದ ಕೂಡಿದ ತ್ಯಾಜ್ಯವು ರಸ್ತೆಗೆ ಹರಡಿಕೊಂಡಿದ್ದು, ಸ್ವಚ್ಛಗೊಳಿಸಲು ಸೂಚಿಸಿದರು.
ಬೊಮ್ಮನಹಳ್ಳಿ ವಲಯ ಆಯುಕ್ತೆ ರಮ್ಯಾ, ಜಂಟಿ ಆಯುಕ್ತ ಅಜಿತ್ ಎಂ., ಮುಖ್ಯ ಎಂಜಿನಿಯರ್ ಶಶಿಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.