ADVERTISEMENT

ಗ್ರೇಟರ್ ಬೆಂಗಳೂರು: ಐದು ವಾರ್ಡ್‌ಗಳಲ್ಲಿ ಹವಾಮಾನ ಕ್ರಿಯಾ ಯೋಜನೆ

ಯೋಜನೆ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಪಾಡ್‌ ಕಾಸ್ಟ್ ಆರಂಭಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:45 IST
Last Updated 8 ಫೆಬ್ರುವರಿ 2026, 23:45 IST
<div class="paragraphs"><p>ಎಂ. ಮಹೇಶ್ವರ್ ರಾವ್</p></div>

ಎಂ. ಮಹೇಶ್ವರ್ ರಾವ್

   

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಂದ ತಲಾ ಒಂದು ವಾರ್ಡ್‌ ಅನ್ನು ಆಯ್ಕೆಮಾಡಿ, ‘ಹವಾಮಾನ ಕ್ರಿಯಾ ಯೋಜನೆ’ಗಳನ್ನು ಸಿದ್ಧಪಡಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ‌ ಎಂ. ಮಹೇಶ್ವರ್ ರಾವ್ ತಿಳಿಸಿದರು.

ಐದು ನಗರ ಪಾಲಿಕೆಗಳ ವಾರ್ಷಿಕ ಆಯವ್ಯಯ ಅಂದಾಜು ಪಟ್ಟಿಗಳೊಂದಿಗೆ ಹವಾಮಾನ ಕ್ರಿಯಾ ಯೋಜನೆಗಳ ಏಕೀಕರಣದ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ಜಿಬಿಎ ಹವಾಮಾನ ಕ್ರಿಯಾ ಕೋಶ ಅಡಿಯಲ್ಲಿ, ವರ್ಕಿಂಗ್ ಗ್ರೂಪ್‌ಗಳ ಸಹಾಯದೊಂದಿಗೆ ಆಯ್ಕೆಯಾದ ಐದು ವಾರ್ಡ್‌ಗಳಲ್ಲಿ ಇಂಧನ ಮತ್ತು ಕಟ್ಟಡಗಳು, ಸಾರಿಗೆ, ಘನ ತ್ಯಾಜ್ಯ ನಿರ್ವಹಣೆ, ನಗರ ಯೋಜನೆ, ಹಸಿರೀಕರಣ ಮತ್ತು ಜೀವವೈವಿಧ್ಯ, ನೀರು ಹಾಗೂ ಮಳೆನೀರು ನಿರ್ವಹಣೆ, ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ಲೇಷಣೆ ನಡೆಸಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಶಾಂತಿನಗರ, ಜಕ್ಕೂರು, ಬೇಗೂರು, ವಿಜಿನಾಪುರ, ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್‌ಗಳಲ್ಲಿನ ಕ್ರಿಯಾ ಯೋಜನೆಗಳ ಮಾದರಿಯಲ್ಲೇ ಉಳಿದ ವಾರ್ಡ್‌ಗಳಿಗೂ ಕ್ರಿಯಾ ಯೋಜನೆ ರಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಐಇಸಿ ಸೆಲ್‌ ರಚಿಸಿ, ವಾರ್ಡ್ ಮಟ್ಟದಲ್ಲಿ ಹವಾಮಾನ ಕ್ರಿಯಾ ಯೋಜನೆಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.

ಹವಾಮಾನ ಕ್ರಿಯಾ ಯೋಜನೆ ಕುರಿತು ನಾಗರಿಕರಲ್ಲಿ ಜಾಗೃತಿ ಮತ್ತು ಆಸಕ್ತಿ ಮೂಡಿಸಲು ಪಾಡ್‌ ಕಾಸ್ಟ್ ಆರಂಭಿಸುವಂತೆ ಸೂಚಿಸಿದರು.

ಶ್ಲಾಘನೆ:

ಇಂಡೊ–ಆಸ್ಟ್ರೇಲಿಯನ್ ಕ್ರೀಡಾಪಟು ಓಂ ಸತಿಜಾ ಅವರು, ಯುವಕರಿಗೆ ಪ್ರೇರಣೆ ನೀಡುವ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ದೇಶದಾದ್ಯಂತ ಓಟವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಹೇಶ್ವರ್ ರಾವ್ ಹೇಳಿದರು.

‘ಒನ್ ರನ್ ಇಂಡಿಯಾ’ ಉಪಕ್ರಮದಡಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 5,000 ಕಿ.ಮೀ. ದೂರದ ಅಪರೂಪದ ಓಟವನ್ನು ಕೈಗೊಂಡಿರುವ ಓಂ ಸತಿಜಾ ಅವರನ್ನು ಜಿಬಿಎ ಕಚೇರಿಯಲ್ಲಿ ಸನ್ಮಾನಿಸಲಾಯಿತು.