ADVERTISEMENT

ಬೆಂಗಳೂರಿನ 28 ಕಡೆ ಸ್ಮಾರ್ಟ್‌ ವರ್ಚ್ಯುವಲ್ ಕ್ಲಿನಿಕ್‌: ಸಿಎಂ ಬೊಮ್ಮಾಯಿ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 19:31 IST
Last Updated 11 ಮಾರ್ಚ್ 2023, 19:31 IST
ಸದಾಶಿವನಗರದಲ್ಲಿ ನಿರ್ಮಾಣವಾಗಿರುವ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್‌ಗೆ ಶನಿವಾರ ಚಾಲನೆ ನೀಡಲಾಯಿತು
ಸದಾಶಿವನಗರದಲ್ಲಿ ನಿರ್ಮಾಣವಾಗಿರುವ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್‌ಗೆ ಶನಿವಾರ ಚಾಲನೆ ನೀಡಲಾಯಿತು   

ಬೆಂಗಳೂರು: ನಗರದಲ್ಲಿ 28 ಕಡೆ ಸ್ಮಾರ್ಟ್‌ ವರ್ಚ್ಯುವಲ್ ಕ್ಲಿನಿಕ್‌ಗಳನ್ನು ತೆರೆಯಲಾಗಿದ್ದು, ಅವುಗಳನ್ನು ನಿರ್ವಹಿಸುವ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಕೇವಲ 11 ತಿಂಗಳಲ್ಲಿ 28 ಕಡೆ ಸ್ಮಾರ್ಟ್‌ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇದರಿಂದ ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ ಸಿಗಲಿವೆ. ಕಮಾಂಡ್‌ ಸೆಂಟರ್‌ನಲ್ಲಿ 20 ತಜ್ಞವೈದ್ಯರ ತಂಡ ಜನರಿಗೆ ಸೇವೆ ಒದಗಿಸಲಿದೆ’ ಎಂದರು.

ನಾಗಪ್ಪ ಬ್ಲಾಕ್‌ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಯುವತಿಯ ಆರೋಗ್ಯ ಪರೀಕ್ಷೆಯನ್ನು ಕಮಾಂಡ್ ಸೆಂಟರ್‌ನಿಂದಲೇ ಇಬ್ಬರು ತಜ್ಞ ವೈದ್ಯರು ನಡೆಸಿದರು. ಇದನ್ನು ವೀಕ್ಷಿಸಿದ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಉನ್ನತ ಶಿಕ್ಷಣ ಸಚಿವ ಸಿ.‌‌ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಜನರಿಗೆ ಆರೋಗ್ಯ ಸುರಕ್ಷೆ ಈಗ ಸವಾಲಾಗಿದ್ದು, ಸಂಕೀರ್ಣ ಮತ್ತು ಆಧುನಿಕ ಜೀವನ ಶೈಲಿಯಿಂದ ಹೊಸ ಸಮಸ್ಯೆಗಳು ಉದ್ಭವಿಸುತ್ತಿವೆ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಜನರಿಗೆ ಎಟಕದಷ್ಟು ದುಬಾರಿಯಾಗಿವೆ. ಇದನ್ನು ಮನಗಂಡು ಸ್ಮಾರ್ಟ್ ವರ್ಚುಯಲ್‌ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಇದಕ್ಕೆ ₹21 ಕೋಟಿ ವಿನಿಯೋಗಿಸಲಾಗಿದೆ’ ಎಂದರು.

ಸಾರ್ವಜನಿಕರಿಗೆ ಆರೋಗ್ಯ ಸೇವೆ ಸುಲಭವಾಗಿ ದೊರಕಿಸಲು ಮೊಬೈಲ್ ಆ್ಯಪ್(iVirtual Vaidya) ಅಭಿವೃದ್ಧಿ ಪಡಿಸಲಾಗಿದೆ. ನಾಗರಿಕರು ಉಪಯೋಗ ಪಡೆಯಬೇಕು ಎಂದು ಹೇಳಿದರು.

ಏನಿದು ವರ್ಚ್ಯುವಲ್ ಕ್ಲಿನಿಕ್?
ಸೆಂಟ್ರಲ್ ಕ್ಲಿನಿಕಲ್ ಕಮಾಂಡ್‌ ಸೆಂಟರ್‌ನಲ್ಲಿ 20ಕ್ಕೂ ಹೆಚ್ಚು ತಜ್ಞ ವೈದ್ಯರು ಕಾರ್ಯ ನಿರ್ವಹಿಸಲಿದ್ದು, ವಿವಿಧೆಡೆ ತೆರೆದಿರುವ ವರ್ಚ್ಯುವಲ್ ಕ್ಲಿನಿಕ್‌ಗಳಿಗೆ ಬರುವ ರೋಗಿಗಳ ಆರೋಗ್ಯವನ್ನು ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸುತ್ತಾರೆ.

ರೋಗಿಯ ಸ್ಥಿತಿ ಆಧರಿಸಿ ಹೆಚ್ಚಿನ ಚಿಕಿತ್ಸೆಗೆ ಅಗತ್ಯ ಇದ್ದರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ. ಹೃದಯ, ಶ್ವಾಸಕೋಶ, ಕಣ್ಣು, ಕಿವಿ ಸೇರಿ ಎಲ್ಲಾ ತಪಾಸಣೆಗಳನ್ನು ಆಧುನಿಕ ಉಪಕರಣಗಳ ಮೂಲಕ ತಪಾಸಣೆ ಮಾಡುವರು.

ವರ್ಚ್ಯುವಲ್ ಕ್ಲಿನಿಕ್‌ಗಳು ಎಲ್ಲೆಲ್ಲಿ?
ಕೋಡಿಹಳ್ಳಿ, ಕೋದಂಡರಾಮಪುರ, ಗಂಗಾನಗರ, ನಾಗಪ್ಪ ಬ್ಲಾಕ್, ಲಿಂಗರಾಜಪುರ, ಮಹಾಲಕ್ಷ್ಮಿ ಲೇಔಟ್, ಸುಲ್ತಾನ್ ಪಾಳ್ಯ, ಮೂಡಲಪಾಳ್ಯ, ಅಶೋಕನಗರ, ನೇತಾಜಿ ವೃತ್ತ, ವಸಂತನಗರ, ಕಾಮಾಕ್ಷಿ ಪಾಳ್ಯ, ಬಾಪೂಜಿನಗರ, ಗಾಂಧಿ ಗ್ರಾಮ, ಗವಿಪುರ ಗುಟ್ಟಹಳ್ಳಿ, ಸುಬೇದಾರ್ ಪಾಳ್ಯ, ಎನ್.ಎಸ್. ಪಾಳ್ಯ, ಕೋಣನಕುಂಟೆ, ಎನ್.ಆರ್. ಕಾಲೊನಿ, ಮಾರತ್ತಹಳ್ಳಿ, ಕುಮಾರಸ್ವಾಮಿ ಲೇಔಟ್, ಉಲ್ಲಾಳ ಉಪನಗರ, ಜೆ.ಪಿ. ನಗರ, ಸಹಕಾರ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ನೆಲಮಹೇಶ್ವರಿ, ಆಜಾದ್ ನಗರ, ಸುಬ್ರಮಣ್ಯ ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.