ADVERTISEMENT

ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಬಂದ ತಕ್ಷಣ ಸ್ಪಂದಿಸಿ: ಯಡಿಯೂರಪ್ಪ

ದೂರಿಗೆ ಸ್ಪಂದಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2020, 2:16 IST
Last Updated 31 ಮೇ 2020, 2:16 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ    

ಬೆಂಗಳೂರು: ‘ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಬರುವ ಕರೆಗಳನ್ನು ಸ್ವೀಕರಿಸಿ, ತಕ್ಷಣ ಸ್ಪಂದಿಸಬೇಕು. ಕರೆ ಸ್ವೀಕರಿಸದ ಬಗ್ಗೆ ದೂರು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅವರು ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದರು.

‘ಅಪಾಯಕಾರಿ ಸ್ಥಿತಿಯಲ್ಲಿರುವ ರೆಂಬೆ, ಕೊಂಬೆಗಳನ್ನು ಕತ್ತರಿಸುವ ಕೆಲಸ ನಿರಂತರ ನಡೆಯಬೇಕು. ಮಳೆಯಿಂದಾಗಿ ಬಿದ್ದ ಎಲ್ಲ ಮರಗಳನ್ನೂ ಎರಡು ದಿನಗಳ ಒಳಗೆ ತೆರವುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ‘ನಗರ ಸಂಚಾರಕ್ಕೆ ಬಂದ ಸಂದರ್ಭದಲ್ಲಿ ಯಾವುದೇ ಲೋಪ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಸಿದರು.

ADVERTISEMENT

‘ಬಿಬಿಎಂಪಿ, ಪೊಲೀಸ್, ಅರಣ್ಯ, ಸಾರಿಗೆ ಮತ್ತು ಅಗ್ನಿಶಾಮಕ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು. ಮರಗಳ ಕೆಳಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅನಾಹುತ ತಡೆಯಲು ತುರ್ತು ಕ್ರಮಗಳನ್ನು
ತೆಗೆದುಕೊಳ್ಳಬೇಕು. ನಗರದ ಎಂಟೂ ವಲಯಗಳಲ್ಲಿ ಮ್ಯಾನ್‌ಹೋಲ್‍ಗಳನ್ನು ಮುಚ್ಚಬೇಕು. ಜೆಟ್ಟಿಂಗ್ ಮಷಿನ್‍ ಸದಾ ಲಭ್ಯ ಇರಬೇಕು’ ಎಂದು ಸೂಚಿಸಿದರು.

ಸಹಾಯಕ ಎಂಜಿನಿಯರ್‌ ಹೊಣೆ: ‘ಎಲ್ಲ ವಲಯಗಳಲ್ಲಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೊಲೀಸ್, ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಿ, ಮಳೆ ಸಂಬಂಧಿಸಿದ ದೂರುಗಳು ಬಂದರೆ ತಕ್ಷಣ ಕ್ರಮವಹಿಸಬೇಕು. ಅನಾಹುತಗಳು ಸಂಭವಿಸಿದರೆ ಸಹಾಯಕ ಎಂಜಿನಿಯರ್‌ಗಳನ್ನು ಹೊಣೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ಎಚ್ಚರಿಕೆ ನೀಡಿದರು.

ಧಾರಾಕಾರ ಮಳೆಯಿಂದಾಗಿ ಸಾವಿಗೀಡಾದ ಇಬ್ಬರು ಮಹಿಳೆಯರ ಕುಟುಂಬಗಳಿಗೆ ಬಿಬಿಎಂಪಿ ವತಿಯಿಂದ ತಲಾ ₹ 5 ಲಕ್ಷದ ಪರಿಹಾರ ನೀಡಲಾಯಿತು.

ಮುಂದುವರಿದ ಮರ ತೆರವು ಕಾರ್ಯ
ಬೆಂಗಳೂರು: ಶುಕ್ರವಾರ ಸುರಿದ ಮಳೆಯಿಂದಾಗಿ 60ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಮುರಿದು ಬಿದ್ದ ಮರ ಹಾಗೂ ರೆಂಬೆ– ಕೊಂಬೆಗಳ ತೆರವು ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಪೂರ್ವ ವಲಯದಲ್ಲೇ ಅತೀ ಹೆಚ್ಚು 15 ಮರಗಳು ಬಿದ್ದಿವೆ. ಮರ ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಸಿಬ್ಬಂದಿ ಕೈಗೊಂಡಿದ್ದು, ಇನ್ನೂ 13 ಮರಗಳ ತೆರವು ಕಾರ್ಯ ಬಾಕಿ ಇದೆ.

‘ಮರ ತೆರವುಗೊಳಿಸಲು ಪಶ್ಚಿಮ ವಲಯದಲ್ಲಿ ನಾಲ್ಕು ತಂಡಗಳು ಮಾತ್ರ ಇವೆ. ಹೀಗಾಗಿ ತೆರವು ಕಾರ್ಯಾಚರಣೆ ವಿಳಂಬವಾಗುತ್ತಿದೆ. ತಂಡಗಳ ಸಂಖ್ಯೆ ಹೆಚ್ಚಳ ಮಾಡಬೇಕು’ ಎಂದು ಪಾಲಿಕೆ ಸದಸ್ಯ ಭದ್ರೇಗೌಡ ಒತ್ತಾಯಿಸಿದರು.

‘ಗಾಳಿ ಇದ್ದರೂ ಶನಿವಾರ ಮಳೆ ಇಲ್ಲದ ಕಾರಣ ಯಾವುದೇ ಪ್ರಕರಣ ವರದಿಯಾಗಿಲ್ಲ. ಮರ ತೆರವುಗೊಳಿಸಲು ಸಿಬ್ಬಂದಿ ಕೊರತೆ ಇಲ್ಲ. ಕೊರೊನಾ ನಿಯಂತ್ರಣದ ಕೆಲಸಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡಿಲ್ಲ. ಎಲ್ಲರೂ ತೆರವು ಕಾರ್ಯಚರಣೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು

ಬಿಬಿಎಂಪಿಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ. ಚೋಳರಾಜಪ್ಪ ತಿಳಿಸಿದರು.

48 ಗಂಟೆಯಲ್ಲಿ ತೆರವಿಗೆ ಸೂಚನೆ: ಬಿದ್ದಿರುವ ಎಲ್ಲಾ ಮರಗಳನ್ನು ಮುಂದಿನ 48 ಗಂಟೆಗಳಲ್ಲಿ ತೆರವುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಸೂಚನೆ ನೀಡಿದ್ಧಾರೆ.

ಅರಣ್ಯ ಘಟಕದ ಮತ್ತು ಕಸ ವಿಲೇವಾರಿ ವಿಭಾಗಗಳ ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ತೆರವು ಕಾರ್ಯಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.