ADVERTISEMENT

ಬೆಂಗಳೂರು | ರಾಜಕಾಲುವೆ ಅಭಿವೃದ್ಧಿ: ₹900 ಕೋಟಿ ಯೋಜನೆ

ಡಿಪಿಆರ್‌ ಸಿದ್ಧಪಡಿಸಲು ಬಿಬಿಎಂಪಿಗೆ ಸೂಚನೆ l ರಾಜಕಾಲುವೆ ಅಭಿವೃದ್ಧಿಗೆ ಜ.30ರ ಗಡುವು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:21 IST
Last Updated 24 ನವೆಂಬರ್ 2021, 20:21 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ವಸತಿ ಸಚಿವ ವಿ.ಸೋಮಣ್ಣ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇದ್ದಾರೆ– ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ವಸತಿ ಸಚಿವ ವಿ.ಸೋಮಣ್ಣ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇದ್ದಾರೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ 30 ಕಿ.ಮೀ ಉದ್ದದ ರಾಜಕಾಲುವೆ ಕಾಮಗಾರಿಯನ್ನು 2020ರ ಜನವರಿ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಡುವು ನಿಗದಿಪಡಿಸಿದರು.

‘ಪ್ರಾಥಮಿಕ ಚರಂಡಿಗಳ ಕಾಮಗಾರಿಗಳನ್ನು ಪ್ರತಿ 15 ದಿನಗಳಿಗೊಮ್ಮೆ ಸಿಎಂ ಡ್ಯಾಶ್ ಬೋರ್ಡ್‌ನಲ್ಲಿ ಖುದ್ದು ಪರಿಶೀಲಿಸುತ್ತೇನೆ. ಕಾಮಗಾರಿ ಪ್ರಗತಿ ಕುರಿತು ಎಂಜಿನಿಯರ್‌ಗಳಿಗೆ ಖುದ್ದು ಕರೆ ಮಾಡುತ್ತೇನೆ. ಕರ್ತವ್ಯ ನಿರ್ಲಕ್ಷ್ಯ ಕಂಡುಬಂದರೆ ಮುಲಾಜಿಲ್ಲದೆ ಅಮಾನತು ಮಾಡಲಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

‘ನಗರದಲ್ಲಿ ಸುರಿದ ಭಾರಿ ಮಳೆಯಾಗಿದ್ದರಿಂದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕೆರೆಗಳ ಕೆಳಗಿನ ಪ್ರದೇಶದ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಅವುಗಳಲ್ಲಿ ನೀರು ಹರಿವಿನ ಸಾಮರ್ಥ್ಯವನ್ನು ಹೆಚ್ಚಿಸಬೇಕು. ರಾಜಕಾಲುವೆಗಳ ಕಲ್ಲಿನ ರಚನೆಗಳನ್ನು ಕಾಂಕ್ರೀಟ್‌ ರಚನೆಗಳನ್ನಾಗಿ ಪರಿವರ್ತಿಸಬೇಕು. ಬಿಬಿಎಂಪಿಗೆ ಸೇರ್ಪಡೆಯಾದ ಹೊರವಲಯದ 110 ಗ್ರಾಮಗಳಲ್ಲಿ ಈಗಲೂ ಕೆಲವೆಡೆ ಕಚ್ಚಾಕಾಲುವೆಗಳಿವೆ. ಇಲ್ಲೂ ಕಾಂಕ್ರೀಟ್‌ ರಚನೆಗಳನ್ನು ನಿರ್ಮಿಸಿ, ಅವುಗಳ ಅಗಲ ವಿಸ್ತರಿಸಬೇಕು. ನೀರು ಸರಾಗವಾಗಿ ಹರಿಯುವುದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳ ಸ್ಥಿತಿಗತಿ ಕುರಿತು ಚರ್ಚಿಸಲು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರುಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ವೃಷಭಾವತಿ, ಹೆಬ್ಬಾಳ, ಕೋರಮಂಗಲ–ಚಲ್ಲಘಟ್ಟ ಕಣಿವೆಗಳ ವ್ಯಾಪ್ತಿಯಲ್ಲಿ 842 ಕಿ.ಮೀ ಉದ್ದದಷ್ಟು ರಾಜಕಾಲುವೆಗಳಿವೆ. ಇವುಗಳಲ್ಲಿ 415 ಕಿ.ಮೀ ಉದ್ದದ ಕಾಲುವೆಗಳು ಈಗಾಗಲೇ ಅಭಿವೃದ್ಧಿಗೊಂಡಿದೆ. 2019 -20 ರಲ್ಲಿ 75 ಕಿ.ಮೀ ಉದ್ದ ಕಾಲುವೆಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದ್ದು, ಅದರಲ್ಲಿ 40 ಕಿ.ಮೀ ಉದ್ದದಷ್ಟು ಕಾಮಗಾರಿ ಪೂರ್ಣಗೊಂಡಿದೆ. ರಾಜಕಾಲುವೆಗಳಲ್ಲಿ ಗಂಭೀರ ಸಮಸ್ಯೆಗಳಿರುವ 94 ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳನ್ನು ಎರಡು ತಿಂಗಳುಗಳ ಒಳಗೆ ಪೂರ್ಣಗೊಳಿಸಲು ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಕೋರಮಂಗಲ–ಚಲ್ಲಘಟ್ಟ ಮತ್ತು ವೃಷಭಾವತಿ ಕಣಿವೆಗಳಲ್ಲಿಯೂ ಗಂಭೀರ ಸಮಸ್ಯೆಗಳಿರುವ ಸ್ಥಳಗಳಿವೆ. ಸುಮಾರು 51 ಕಿ.ಮೀ ಉದ್ದ ಪ್ರಾಥಮಿಕ ರಾಜಕಾಲುವೆಗಳನ್ನು ದುರಸ್ತಿಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕಿದೆ. 38 ಕಿ.ಮೀಗಳಷ್ಟು ದ್ವಿತೀಯ ಹಂತದ ರಾಜಕಾಲುವೆಗಳ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ನಾಲ್ಕು ಕಣಿವೆಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳು ಹಾಗೂ ಇಂದಿನ ಸ್ಥಿತಿಗತಿಗಳನ್ನು ಆಧರಿಸಿಕಾಲುವೆ ವ್ಯವಸ್ಥೆ ಸರಿಪಡಿಸಬೇಕಿದೆ. ಈ ಜಟಿಲವಾದ ಸವಾಲಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ₹ 900 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಯೋಜನೆ (ಡಿಪಿಆರ್) ಸಿದ್ಧಪಡಿಸುವಂತೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಇದಕ್ಕೆ ತಕ್ಷಣವೇ ವಿಶೇಷ ಅನುದಾನ ಬಿಡುಗಡೆ ಮಾಡುತ್ತೇವೆ’ ಎಂದರು.

‘ಕಾಮಗಾರಿಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು 197 ಕ್ಷೇತ್ರ ಎಂಜಿನಿಯರ್‌ಗಳನ್ನು ನೇಮಿಸಬೇಕಿದೆ. ಈ ಸಲುವಾಗಿ 130 ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಮಳೆ ನಿಂತ ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಅರ್ಧ ಕಿಲೊ ಮೀಟರ್‌ಗಿಂತ ಹೆಚ್ಚು ಉದ್ದಕ್ಕೆ ರಸ್ತೆ ಹಾಳಾಗಿದ್ದರೆ, ಅಲ್ಲಿ ಡಾಂಬರು ಹಾಕಲು ಸೂಚನೆ ನೀಡಿದ್ದೇನೆ’ ಎಂದು ಅವರು ತಿಳಿಸಿದರು.

‘714 ಕಡೆ ಒತ್ತುವರಿ ತೆರವು ಬಾಕಿ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ 2,626 ಕಡೆ ರಾಜಕಾಲುವೆಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 1,480 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ 714 ಕಡೆ ತೆರವು ಕಾರ್ಯ ಬಾಕಿ ಇದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಬಿಲ್ಡರ್‌ಗಳು ಹಾಗೂ ಪ್ರಭಾವಿಗಳು ಮಾಡಿರುವ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಬೇಕು. ಬಡವರಿಗೆ ಕಾಲಾವಕಾಶ ನೀಡಬೇಕು ಎಂದು ಸೂಚನೆ ನೀಡಿದರು.

ಮುಖ್ಯಮಂತ್ರಿ ನೀಡಿರುವ ಸೂಚನೆಗಳು

l ಮಳೆ ಬಂದಾಗ ರಸ್ತೆಗಳಲ್ಲಿ ನೀರು ನಿಲ್ಲದಂತೆ, ಮನೆಗಳಿಗೆ ನೀರು ನುಗ್ಗದಂತೆ ತುರ್ತು ಪರಿಹಾರ ಕೈಗೊಳ್ಳಬೇಕು.

l ಕಾಮಗಾರಿಗಳನ್ನು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಅನುದಾನದಲ್ಲಿ ತ್ವರಿತವಾಗಿ ಕೈಗೊಳ್ಳಬೇಕು. ಇತರ ಇಲಾಖೆಗಳೊಂದಿಗೆ ಚರ್ಚಿಸಿ ಕಾಮಗಾರಿಯನ್ನು ಮುಂಬರುವ ಜನವರಿಯೊಳಗೆ ಪ್ರಾರಂಭಿಸಬೇಕು.

l ಸಂಸ್ಕರಿಸದ ತ್ಯಾಜ್ಯನೀರನ್ನು ರಾಜಕಾಲುವೆಗೆ ಹರಿಸಲೇಬಾರದು. ತ್ಯಾಜ್ಯ ನೀರು ಶುದ್ಧೀಕರಣಕ್ಕಾಗಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಸರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.