
ಬೆಂಗಳೂರು: ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಕಾರ್ಯಾಚರಣೆ ನಡೆಸಿ, ಬಸ್‌ನಲ್ಲಿ ಮುಂಬೈನಿಂದ ಬೆಂಗಳೂರಿಗೆ ಬ್ರೆಡ್‌ನಲ್ಲಿ ಅಡಗಿಸಿಟ್ಟು ಕೊಕೇನ್ ಸಾಗಣೆ ಮಾಡುತ್ತಿದ್ದ ವಿದೇಶಿ ಮಹಿಳೆಯನ್ನು ಬಂಧಿಸಿದೆ.
ನೈಜೀರಿಯಾದ ಡ್ರಗ್ ಪೆಡ್ಲರ್ ಓಲಜೈಡ್ ಎಸ್ತರ್ ಇಯಾನುವುಒಲನಾ (29) ಎಂಬಾಕೆಯನ್ನು ಬಂಧಿಸಿ, 121 ಗ್ರಾಂ ತೂಕದ ಕೊಕೇನ್, ಕೃತ್ಯಕ್ಕ ಬಳಸಿದ್ದ ಮೊಬೈಲ್ ಸೇರಿ ಅಂದಾಜು ₹1.20 ಕೋಟಿ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
‘2024ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಮುಂಬೈಗೆ ಬಂದಿದ್ದ ಆರೋಪಿ, ಕಾಲೇಜಿಗೆ ದಾಖಲಾಗದೆ ಮುಂಬೈನ ಗಾಲಾನಗರ, ಅಂಬವಾಡಿ, ನಲ್ಲಾಸೋಪ್ರಾ ಕಡೆ ವಾಸವಾಗಿದ್ದುಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಸ್ನೇಹಿತ ನೀಡುತ್ತಿದ್ದ ಕೊಕೇನ್ ಪಡೆದುಕೊಂಡು, ಸೂಚಿಸಿದ ಸ್ಥಳಗಳಿಗೆ ತಲುಪಿಸಿ, ಡ್ರಗ್ ಪೆಡ್ಲಿಂಗ್ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು’ ಎಂದು ಪೊಲೀಸರು ತಿಳಿಸಿದರು.
‘ಬ್ರೆಡ್ ಅನ್ನು ಮಧ್ಯೆ ಕತ್ತರಿಸಿ ಕೊಕೇನ್ ಅನ್ನು ಇಟ್ಟು ಅನುಮಾನ ಬಾರದಂತೆ ಕವರ್ ಪ್ಯಾಕ್ ಮಾಡಿ ಮುಂಬೈನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಸಾಗಣೆ ಮಾಡುತ್ತಿದ್ದಳು. ಖಚಿತ ಮಾಹಿತಿಯ ಮೇರೆಗೆ ಡಿಆರ್‌ಐ ಅಧಿಕಾರಿಗಳು ಶಿರಾದಿಂದ ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಅದೇ ರೀತಿ ಸಿಸಿಬಿ ಪೊಲೀಸರು ನೆಲಮಂಗಲ ಟೋಲ್‌ನಿಂದ ಆಕೆ ಇದ್ದ ಬಸ್ ಹಿಂಬಾಲಿಸಿದರು’ ಎಂದು ಹೇಳಿದರು.
ವರ್ತೂರು ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಸ್ನೇಹಿತನ ಮನೆಗೆ ಆರೋಪಿ ಬಂದ ತಕ್ಷಣ, ಪೊಲೀಸರು ದಾಳಿ ಮಾಡಿ ಪರಿಶೀಲಿಸಿದಾಗ ಡ್ರಗ್ಸ್ ಸಿಗಲಿಲ್ಲ. ಆಕೆಯ ತಂದಿದ್ದ ಬ್ರೆಡ್ ಬಾಕ್ಸ್ ಅನ್ನು ಪರಿಶೀಲಿಸಿದಾಗ ಬ್ರೆಡ್ ಮಧ್ಯೆ ಕೊಕೇನ್ ಇಟ್ಟುಕೊಂಡು ಬಂದಿರುವುದು ಗೊತ್ತಾಯಿತು. ತಕ್ಷಣ ಡ್ರಗ್ಸ್ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಲಾಯಿತು.
ಕೃತ್ಯದಲ್ಲಿ ಈಕೆಯ ಸ್ನೇಹಿತೆಯೂ ಭಾಗಿಯಾಗಿದ್ದಾರೆಯೇ ? ಮಾದಕ ವಸ್ತುಗಳನ್ನು ವಿದೇಶಿ ಮಹಿಳೆಗೆ ಯಾರು ತಂದು ಕೊಡುತ್ತಿದ್ದರು ? ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಯು ಬ್ರೆಡ್ ಹಾಗೂ ಇತರೆ ವಸ್ತುಗಳ ಕವರ್‌ಗಳಲ್ಲಿ ಮಾದಕ ವಸ್ತುಗಳನ್ನು ಪ್ಯಾಕ್ ಮಾಡಿ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ. ವಶಪಡಿಸಿಕೊಂಡಿರುವ ಕೊಕೇನ್ ಗುಣಮಟ್ಟದ್ದಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ ಎಂದು ಮಾಹಿತಿ ನೀಡಿದರು.
ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಹೈಡ್ರೊ ಗಾಂಜಾ: ಕೇರಳದ ಇಬ್ಬರ ಸೆರೆ ಜಾಲಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರನ್ನು ಬಂಧಿಸಿದ್ದಾರೆ.
ನಿಝಿಲ್ ರಾಜ್ ಮೆಲ್ವಿನ್ ಎಂಬುವವರನ್ನು ಬಂಧಿಸಿ 247 ಗ್ರಾಂ ಹೈಡ್ರೊ ಗಾಂಜಾ ಮತ್ತು 19 ಗ್ರಾಂ ಎಂಡಿಎಂಎ ಸೇರಿ ಅಂದಾಜು ₹26.90 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರನ್ನೂ ಡ್ರಗ್ಸ್ ಸಮೇತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು. ಅಧಿಕ ಹಣ ಗಳಿಸುವ ಉದ್ದೇಶದಿಂದ ಡ್ರಗ್ಸ್ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.