ADVERTISEMENT

ಸಮುದಾಯ ಪ್ರಾಣಿಗಳೊಂದಿಗೆ ಸಹಬಾಳ್ವೆ: ಜಾಗೃತಿ ಅಭಿಯಾನ

ಬೀದಿ ನಾಟಕ, ನೃತ್ಯ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 16:25 IST
Last Updated 19 ಜನವರಿ 2025, 16:25 IST
ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ಜಾಗೃತಿ ಅಭಿಯಾನ ಬೊಮ್ಮನಹಳ್ಳಿ ವಲಯದಲ್ಲಿ ನಡೆಯಿತು
ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ಜಾಗೃತಿ ಅಭಿಯಾನ ಬೊಮ್ಮನಹಳ್ಳಿ ವಲಯದಲ್ಲಿ ನಡೆಯಿತು   

ಬೆಂಗಳೂರು: ‘ಪ್ರಾಣಿಗಳ ಆರೋಗ್ಯದ ಮೂಲಕ ಸಾರ್ವಜನಿಕ ಆರೋಗ್ಯ‘ದ ಶೀರ್ಷಿಕೆಯಡಿ ಸಮುದಾಯ ಪ್ರಾಣಿಗಳ ಸಹಬಾಳ್ವೆ ಮೂಡಿಸುವ ಜಾಗೃತಿ ಅಭಿಯಾನ ಭಾನುವಾರ ನಗರದ ವಿವಿಧ ವಲಯಗಳಲ್ಲಿ ನಡೆಯಿತು.

ಸಮುದಾಯ ಪ್ರಾಣಿಗಳಿಗಾಗಿ ಪಾಲಿಕೆಯ ಪಶುಪಾಲನಾ ವಿಭಾಗದಿಂದ ಹಮ್ಮಿಕೊಂಡಿರುವ  ಕಾರ್ಯಕ್ರಮಗಳ ಮಾಹಿತಿ ನೀಡಲಾಯಿತು. ಪ್ರಾಣಿಗಳ ಕುರಿತು ಇರುವ ಕಾಯ್ದೆಗಳ ಬಗ್ಗೆ ಪರಿಚಯಿಸಲಾಯಿತು. ನಾಗರಿಕರು ಏನು ಮಾಡಬಹುದು-ಏನು ಮಾಡಬಾರದು, ಸಮಸ್ಯೆಯಾದರೆ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ನೀಡುವ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.

ಜನರಿಂದ ಸಮುದಾಯದ ಪ್ರಾಣಿಗಳಿಗೆ ಆಗುವ ಸಮಸ್ಯೆಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿ ಹೇಳಲಾಯಿತು. ಮನುಷ್ಯರಂತೆಯೇ ಪ್ರಾಣಿಗಳು ಎಂದು ತಿಳಿದು ಅವುಗಳ ಜೊತೆ ಸೌಹಾರ್ದವಾಗಿ ವರ್ತಿಸಬೇಕು. ಕ್ರೂರವಾಗಿ ನಡೆದುಕೊಳ್ಳಬಾರದು ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ನಾಲ್ಕು ವಲಯಗಳಲ್ಲಿ ಜಾಗೃತಿ: ಆರ್.ಆರ್ ನಗರ ವಲಯದ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್ ಮಾಲ್‌ನಲ್ಲಿ ನೃತ್ಯ ರೂಪಕದ ಮೂಲಕ ಸಮುದಾಯದ ಪ್ರಾಣಿಗಳ ಕುರಿತು ಅರಿವು ಮೂಡಿಸಲಾಯಿತು. 200ಕ್ಕೂ ಹೆಚ್ಚು ಮಂದಿಗೆ ಮಾನವ ಪ್ರಾಣಿಗಳ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸಲಾಯಿತು‌.

ಮಹಾದೇವಪುರದ ವಲಯ ವ್ಯಾಪ್ತಿಯಲ್ಲಿ ನೆಕ್ಸಸ್ ಶಾಂತಿನಿಕೇತನ, ಬ್ರೂಕ್‌ಫೀಲ್ಡ್, ಪಾರ್ಕ್ ಸ್ಕ್ವೇರ್, ನೆಕ್ಸಸ್ ವೈಟ್‌ಫೀಲ್ಡ್, ಬೆಂಗಳೂರು ಸೆಂಟ್ರಲ್ ಮಾಲ್‌ಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು. 

ಪೂರ್ವ ವಲಯದಲ್ಲಿ ಫನ್ ವರ್ಲ್ಡ್, ಕುಮಾರ ಪಾರ್ಕ್, ತರಳಬಾಳು ರಸ್ತೆ, ಬೊಮ್ಮನಹಳ್ಳಿ‌ ವಲಯದಲ್ಲಿ ಕೋಡಿಚಿಕ್ಕನಹಳ್ಳಿಯ ಶನೇಶ್ವರ ದೇವಸ್ಥಾನ, ಕೂಡ್ಲು ಗೇಟ್ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಮುದಾಯದ ಪ್ರಾಣಿಗಳ ಕುರಿತು ಬೀದಿ ನಾಟಕ, ನೃತ್ಯ ಮಾಡಲಾಯಿತು. ಭಿತ್ತಿಪತ್ರಗಳನ್ನು ವಿತರಿಸಲಾಯಿತು.

ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ವೆಂಕಟೇಶ್, ಡಾ. ರುದ್ರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.